ಸ್ಯಾಟಲೈಟ್ ಟೌನ್ ಬೆಳೆಸುವ ಅಗತ್ಯವಿದೆ: ಜಿ.ಪರಮೇಶ್ವರ್

ಬೆಂಗಳೂರು, ಜೂ.22: ನಮ್ಮ ಮೆಟ್ರೋ 2ನೇ ಫೇಸ್ ಮುಕ್ತಾಯಗೊಂಡರೆ ಸುಮಾರು 20 ಲಕ್ಷ ಪ್ರಯಾಣಿಕರು ಮೆಟ್ರೋ ಬಳಸುವ ಮೂಲಕ ಸಂಚಾರ ದಟ್ಟಣೆ ಸಮಸ್ಯೆಗೆ ಕಡಿವಾಣ ಹಾಕಬಹುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಜಿ.ಪರಮೇಶ್ವರ್ ಇಂದಿಲ್ಲಿ ಹೇಳಿದರು.
ಶುಕ್ರವಾರ ಸಂಜೆ ನಗರ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಆರು ಬೋಗಿಗಳ ನಮ್ಮ ಮೆಟ್ರೋಗೆ ಹಸಿರು ನಿಶಾನೆ ಸೂಚಿಸಿ ಬಳಿಕ ಮಾತನಾಡಿದ ಅವರು, ಬೆಂಗಳೂರು ಏಷ್ಯಾದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದು. ಈ ಹಿನ್ನೆಲೆಯಲ್ಲಿ ಮೆಟ್ರೋ ಜನರಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದು ತಿಳಿಸಿದರು.
ಬೆಂಗಳೂರು ಬೆಳೆಯುತ್ತಿರುವ ವೇಗಕ್ಕೆ ಮುಂದಿನ ದಿನಗಳಲ್ಲಿ ಕಡಿವಾಣ ಹಾಕಬೇಕಿದೆ. ಅಕ್ಕ ಪಕ್ಕದ ಸ್ಯಾಟಲೈಟ್ ಟೌನ್‌ಗಳನ್ನು ಬೆಳೆಸಿ, ಮೆಟ್ರೋ, ಸಬ್‌ಅರ್ಬನ್ ರೈಲುಗಳ ಜೋಡಣೆ ಮಾಡುವ ಮೂಲಕ ನಗರದ ಅಭಿವೃದ್ಧಿಯನ್ನು ವಿಸ್ತರಿಸಬೇಕಿದೆ ಎಂದು ವಿವರಿಸಿದರು.
ನಮ್ಮ ಮೆಟ್ರೋ ಮೊದಲ ಫೇಸ್‌ನಲ್ಲಿ ನಿತ್ಯ ಮೂರುವರೆ ಲಕ್ಷ ಜನರು ಪ್ರಯಾಣ ಮಾಡುತ್ತಿದ್ದಾರೆ. 72 ಕಿ.ಮೀ.ನ 2ನೇ ಫೇಸ್ ಮೆಟ್ರೋ ಕಾಮಗಾರಿ ಪೂರ್ಣಗೊಂಡರೆ 20 ಲಕ್ಷ ಜನ ಸಂಚರಿಸಲಿದ್ದಾರೆ ಎಂದು ಪರಮೇಶ್ವರ್ ಹೇಳಿದರು.







