ವಿದ್ಯಾರ್ಥಿಗಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಿ: ಶೇಷಶಯನ

ಮಣಿಪಾಲ, ಜೂ.22: ವೃತ್ತಿ ಶಿಕ್ಷಕರನ್ನು ಹೆಚ್ಚಾಗಿ ಎಲ್ಲ ವಿದ್ಯಾರ್ಥಿಗಳು ಪ್ರೀತಿಸುತ್ತಾರೆ. ಯಾಕೆಂದರೆ ವಿದ್ಯಾರ್ಥಿಗಳು ಮೆಚ್ಚುವ ಹಲವು ಹವ್ಯಾಸಗನ್ನು, ಜೀವನಕೌಶಲ್ಯಗಳನ್ನು ಕಲಿಸುವವರು ವೃತ್ತಿ ಶಿಕ್ಷಕರು. ಆದುದರಿಂದ ಶಾಲೆಯ ಪರಿಸರವನ್ನು ಶಿಕ್ಷಣಕ್ಕೆ ಪೂರಕವಾಗಿಸುವ ಜೊತೆಗೆ ವಿದ್ಯಾರ್ಥಿಗಳ ಮನಸ್ಸನ್ನೂ ಜೀವನದ ಸವಾಲುಗಳನ್ನು ಎದುರಿಸಲು ಸನ್ನದ್ದಗೊಳಸುವುದು ವೃತ್ತಿ ಶಿಕ್ಷಕರಿಗೆ ಸುಲಭ ಸಾಧ್ಯ ಎಂದು ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಶೇಷಶಯನ ಹೇಳಿದರು.
ಮಣಿಪಾಲ ಶಿವಳ್ಳಿಯ ಭಾರತೀಯ ವಿಕಾಸ ಟ್ರಸ್ಟಿನಲ್ಲಿ ಉಡುಪಿ ಜಿಲ್ಲಾ ವೃತ್ತಿ ಶಿಕ್ಷಣ ಶಿಕ್ಷಕರಿಗೆ ನಡೆದ ಒಂದು ದಿನದ ವೃತ್ತಿ ಕಾರ್ಯಾಗಾರವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಆದುದರಿಂದ ವೃತ್ತಿ ಶಿಕ್ಷಕರು ತಮ್ಮ ವೃತ್ತಿ ಪರಿಧಿಯನ್ನೂ ಮೀರಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಸಹಾಯಕರಾಗಬೇಕು ಎಂದು ಅವರು ಕರೆ ನೀಡಿದರು.
ಶಿಕ್ಷಣ ಇಲಾಖೆಯ ಜಿಲ್ಲಾ ವಿಷಯ ಪರಿವೀಕ್ಷರಕ ನಾಗರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ತರಬೇತಿಯ ಧ್ಯೇಯೋದ್ಧೇಶಗಳನ್ನು ವಿವರಿಸಿದರು. ಬಾರಕೂರು ನೇಶನಲ್ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಬಿ. ಸೀತಾರಾಮ ಶೆಟ್ಟಿ ತರಬೇತಿ ಬಗ್ಗೆ ಸಮಯೋಚಿತವಾಗಿ ಮಾತನಾಡಿದರು. ಅಕ್ಷರ ದಾಸೋಹದ ಜಿಲ್ಲಾ ಶಿಕ್ಷಣಾಧಿಕಾರಿ ನಾಗೇಂದ್ರ ಶಾನುಭಾಗ್, ಬಿವಿಟಿ ಸಿಇಒ ಮನೋಹರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಭಾರತೀಯ ವಿಕಾಸ ಟ್ರಸ್ಟಿನ ಆಡಳಿತ ಟ್ರಸ್ಟಿ ಕೆ.ಎಂ.ಉಡುಪ ಅತಿಥಿಗಳನ್ನು ಸ್ವಾಗತಿಸಿದರು. ಉಡುಪಿ ಜಿಲ್ಲಾ ಪ್ರೌಢ ಶಾಲಾ ವೃತ್ತಿ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ವಿಶ್ವನಾಥ ವಂದಿಸಿ ಬಿವಿಟಿ ಮುಖ್ಯ ಕಾರ್ಯಕ್ರಮ ಸಂಯೋಜಕಿ ಲಕ್ಷ್ಮಿೀ ಬಾಯಿ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ತೆಕ್ಕಟ್ಟೆಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ವೃತ್ತಿ ಶಿಕ್ಷಕರಾಗಿ 29 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಲಿರುವ ಕೆ.ಲಕ್ಷ್ಮಣ ಪಟಗಾರ ರನ್ನು ಸನ್ಮಾನಿಸಲಾಯಿತು ಉಡುಪಿ ಜಿಲ್ಲೆಯ 30ಕ್ಕೂ ಹೆಚ್ಚು ಪ್ರೌಢ ಶಾಲಾ ವೃತ್ತಿ ಶಿಕ್ಷಕರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.







