ಕಾಪು ಪೇಟೆಯಲ್ಲಿ ಚರಂಡಿ ಸಮಸ್ಯೆ: ಪುರಸಭೆ ನಿರ್ಲಕ್ಷ ಆರೋಪ

ಕಾಪು, ಜೂ.22: ಕಾಪು ಪೇಟೆಯಲ್ಲಿರುವ ಜಾವೇದ್ ಬಿಲ್ಡಿಂಗ್‌ನ ಎದುರಿನ ಚರಂಡಿ ಕಾಮಗಾರಿ ಅಸಮರ್ಪಕವಾಗಿದ್ದು, ಈ ಬಗ್ಗೆ ಕಾಪು ಪುರಸಭೆಗೆ ದೂರು ನೀಡಿದರೂ ಯಾವುದೇ ರೀತಿ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮೇ 29ರಂದು ಸುರಿದ ಭಾರೀ ಮಳೆಯಿಂದ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಮತ್ತು ಸಮೀಪದಲ್ಲಿರುವ ಗೂಡಂಗಡಿಯವರು ಮಣ್ಣು ಹಾಕಿದ ಪರಿ ಣಾಮ ನೀರು ಉಕ್ಕಿ ಹರಿದು ಸಮೀಪದ ಮನೆ ಹಾಗೂ ಅಂಗಡಿಗಳಿಗೆ ನುಗ್ಗಿ ಸಾವಿರಾರು ರೂ. ನಷ್ಟ ಉಂಟಾಗಿತ್ತು. ಈ ಬಗ್ಗೆ ಜೂ.2ರಂದು ಸ್ಥಳೀಯರು ಕಾಪು ಪುರಸಭೆಗೆ ದೂರು ನೀಡಿದ್ದರು.
ಅದರಂತೆ ಪುರಸಭೆಯವರು ಜಾವೆದ್ ಬಿಲ್ಡಿಂಗ್ ಎದುರಿನ ಚರಂಡಿಗೆ ಮುಚ್ಚಿದ ಕಲ್ಲುಗಳನ್ನು ತೆಗೆದು ಹೂಳು ತೆಗೆದಿದ್ದರು. ಆದರೆ ಚರಂಡಿಯಿಂದ ತೆಗೆದ ಕಲ್ಲುಗಳನ್ನು ಮುಚ್ಚದೆ ಅರ್ಧಂಬರ್ಧ ಕಾಮಗಾರಿ ನಡೆಸಿ ಹೋಗಿದ್ದಾರೆ. ಇದೀಗ ತೆರೆದ ಚರಂಡಿ ಮಕ್ಕಳಿಗೆ ಅಪಾಯವನ್ನು ಆಹ್ವಾನಿಸುತ್ತಿದ್ದು, ಫೋಷಕರು ಪುರಸಭೆ ವಿುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಾವೆದ್ ಬಿಲ್ಡಿಂಗ್ ಸಮೀಪದಲ್ಲಿರುವ ಗೂಡಂಗಡಿಯಿಂದ ಚರಂಡಿ ಸಮಸ್ಯೆ ಎದುರಾಗಿರುವುದರಿಂದ ಕೂಡಲೇ ಆ ಗೂಡಂಗಡಿಯನ್ನು ತೆರವುಗೊಳಿ ಸಬೇಕೆಂಬ ಆಗ್ರಹ ಕೇಳಿ ಬಂದಿದೆ. ‘ಹಲವು ಬಾರಿ ದೂರು ನೀಡಿದರೂ ಪುರ ಸಭೆ ಸ್ಪಂದಿಸುತ್ತಿಲ್ಲ. ಮೇಲಾಧಿಕಾರಿಗಳಿಗೆ ದೂರು ನೀಡಿದರೆ ಸ್ಥಳೀಯ ಪೊಲೀಸರು ಬಂದು ನಮಗೆ ಅವಾಚ್ಯಶಬ್ದಗಳಿಂದ ಬೈಯುತ್ತಾರೆ. ಆದುದರಿಂದ ಈ ಚರಂಡಿ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು’ ಎಂದು ಜಾವೇದ್ ಬಿಲ್ಡಿಂಗ್‌ನ ಮುಹಮ್ಮದ್ ಝುಬೇರ್ ಒತ್ತಾಯಿಸಿದ್ದಾರೆ.







