ಬೆಂಗಳೂರು: ಪತ್ನಿಯನ್ನು ಗುಂಡಿಕ್ಕಿ ಹತ್ಯೆಗೈದ ಉದ್ಯಮಿ

ಬೆಂಗಳೂರು, ಜೂ.22: ಹಣಕಾಸಿನ ವಿಚಾರಕ್ಕೆ ಪಿಸ್ತೂಲಿನಿಂದ ಗುಂಡಿಕ್ಕಿ ಪತ್ನಿಯನ್ನು ಕೊಂದು ಮಕ್ಕಳಿಗೆ ಗುಂಡಿಕ್ಕಿ, ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಉದ್ಯಮಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ
ಜಯನಗರದ ನಿವಾಸಿ ಉದ್ಯಮಿ ಗಣೇಶ ಎಂಬುವರ ಪತ್ನಿ ಸಹನಾ(42) ಕೊಲೆಯಾದ ದುರ್ದೈವಿಯಾಗಿದ್ದು, ಗುಂಡೇಟಿನಿಂದ ಗಂಭೀರ ಗಾಯಗೊಂಡಿರುವ ಇಬ್ಬರು ಮಕ್ಕಳನ್ನು ಚಿಕಿತ್ಸೆಗಾಗಿ ಕನಕಪುರ ರಸ್ತೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಕಲೇಶಪುರ ಮೂಲದ ಉದ್ಯಮಿ ಗಣೇಶ ಕಾಫಿ ತೋಟ ಮಾರಾಟ ಮಾಡಿ ಬೆಂಗಳೂರಿನಲ್ಲಿ ನೆಲೆಸಿ ಕನಕಪುರ ರಸ್ತೆಯ ನೆಟ್ಟಿಗೆರೆಯಲ್ಲಿ ಹರ್ಬಲ್ ವುಡ್ ಫಾರ್ಮ್ ಹೌಸ್ ರೆಸಾರ್ಟ್ ನಡೆಸುತ್ತಿದ್ದರು. ಎರಡು ವರ್ಷಗಳಿಂದ ನಷ್ಟ ಅನುಭವಿಸುತ್ತಿದ್ದು, ಲಕ್ಷಾಂತರ ರೂ.ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ಸಾಲಗಾರರ ಒತ್ತಡಕ್ಕೆ ರೆಸಾರ್ಟ್ ಮಾರಾಟ ಮಾಡಲು ಮುಂದಾಗಿದ್ದ ಗಣೇಶ್ ನಿರ್ಧಾರವನ್ನು ಪತ್ನಿ ಸಹನಾ ವಿರೋಧಿಸಿದ್ದರು. ಇದರಿಂದ ಆಕ್ರೋಶಗೊಂಡ ಗಣೇಶ್ ತನ್ನ ಬಳಿಯಿದ್ದ ಪಿಸ್ತೂಲಿನಿಂದ ಪತ್ನಿ ಸಹನಾಳಿಗೆ ಗುಂಡಿಕ್ಕಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಕನಕಪುರ ರಸ್ತೆಯ ರೆಸಾರ್ಟ್‌ಗೆ ಪರಾರಿಯಾಗುತ್ತಿದ್ದಾಗ ಮಾರ್ಗ ಮಧ್ಯೆ ಕಾರಿನಲ್ಲಿ ತನ್ನ ಮಕ್ಕಳಿಗೂ ಪಿಸ್ತೂಲಿನಿಂದ ಗುಂಡಿಕ್ಕಿದ್ದಾನೆ. ನಂತರ ಕನಕಪುರ ರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತಿದ್ದಾಗ ಮಕ್ಕಳು ನರಳಾಡುವುದನ್ನು ಗಮನಿಸಿದ್ದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ. ಶರಣ್ಪ ತಿಳಿಸಿದ್ದಾರೆ.
3 ಗುಂಡು ಪತ್ತೆ..!
ಮರಣೋತ್ತರ ಪರೀಕ್ಷೆ ವೇಳೆ ಸಹನಾ ದೇಹದಲ್ಲಿ ಪಿಸ್ತೂಲಿನ 2 ಗುಂಡುಗಳು ಪತ್ತೆಯಾಗಿದ್ದು, ಮತ್ತೊಂದು ಜಯನಗರದ ಮನೆಯಲ್ಲಿ ಪತ್ತೆಯಾಗಿದೆ ಎಂದು ಹಿರಿಯ ಪೊಲೀಸರು ತಿಳಿಸಿದ್ದಾರೆ.







