ಮಳೆ, ಪೈಪೋಟಿ ಹಾಲು ಮಾರುಕಟ್ಟೆಗೆ ಸವಾಲು : ರವಿರಾಜ್ ಹೆಗ್ಡೆ

ಪುತ್ತೂರು, ಜೂ. 22: ಜಿಲ್ಲೆಯಲ್ಲಿ ದಾಖಲೆ ಪ್ರಮಾಣದಲ್ಲಿ ಹಾಲು ಸಂಗ್ರಹವಾಗುತ್ತಿದ್ದರೂ ಮಳೆ ಹಾಗೂ ಪೈಪೋಟಿ ಕಾರಣದಿಂದ ಹಾಲು ಮಾರುಕಟ್ಟೆಗೆ ಸಾಕಷ್ಟು ಸವಾಲು ಎದುರಾಗಿದೆ. ಆದ್ದರಿಂದ ಮುಂದಿನ ಎರಡು ಮೂರು ತಿಂಗಳ ಮಟ್ಟಿಗೆ ಸಂಘಕ್ಕೆ ನೀಡುವ ಹಾಲಿನಲ್ಲಿ ಅರ್ಧ ಅಥವಾ ಒಂದು ಲೀಟರ್ ಹಾಲನ್ನಾದರೂ ಕಡಿತ ಮಾಡಿ, ಮನೆ ಮಂದಿಯ ಆರೋಗ್ಯ ದೃಷ್ಟಿಯಿಂದ ಮನೆ ಬಳಕೆಗೆ ಬಳಸಿಕೊಳ್ಳಿ ಎಂದು ದ.ಕ. ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ರವಿರಾಜ್ ಹೆಗ್ಡೆ ತಿಳಿಸಿದರು.
ಅವರು ಪುತ್ತೂರಿನ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ದ.ಕ. ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘದಡಿ ಪುತ್ತೂರು ತಾಲೂಕಿನಲ್ಲಿ 70 ಸಾವಿರದಷ್ಟು ಸದಸ್ಯರು ಇದ್ದು, ಪ್ರತಿಯೊಬ್ಬರು ದಿನಕ್ಕೆ ಒಂದು ಲೀಟರ್ ಹಾಲು ನೀಡುವುದು ಕಡಿಮೆ ಮಾಡಿದರೂ, ದಿನಕ್ಕೆ 70 ಸಾವಿರ ಲೀಟರ್ ಹಾಲು ಕಡಿಮೆ ಆಗುತ್ತದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಪ್ರತಿದಿನ 4,82,000 ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಆದರೆ ವರ್ಷದಿಂದ ವರ್ಷಕ್ಕೆ ಹಾಲು ಅಥವಾ ಹಾಲಿನ ಉತ್ಪನ್ನಗಳ ಬಳಕೆದಾರರ ಸಂಖ್ಯೆ ಕಡಿಮೆ ಆಗುತ್ತಿದೆ. 2 ವರ್ಷಗಳ ಹಿಂದೆ ಶೇ. 20ರಷ್ಟು ಕಡಿಮೆ ಆಗಿದ್ದರೆ, ಹಿಂದಿನ ವರ್ಷ ಶೇ. 10ರಷ್ಟು ಕಡಿಮೆಯಾಗಿದೆ. ಈ ವರ್ಷ ಶೇ. 13ರಷ್ಟು ಕಡಿಮೆ ಆಗುವ ನಿರೀಕ್ಷೆ ಇದೆ ಎಂದು ಅವರು ಮಾಹಿತಿ ನೀಡಿದರು.
ಉತ್ಪಾದನೆಯಾದ ಹಾಲಿನಲ್ಲಿ ಶೇ. 35ರಷ್ಟು ಹಾಲನ್ನು ಹುಡಿಯಾಗಿ ಪರಿವರ್ತನೆ ಮಾಡಲಾಗುತ್ತಿದ್ದು, ಪರಿವರ್ತನೆ ಮಾಡುವ ಸಂದರ್ಭದಲ್ಲಿ ಶೇ. 10ರಷ್ಟು ಹಾಲು ನಷ್ಟ ಆಗುತ್ತದೆ. ಇದರಿಂದಾಗಿ ಹಿಂದಿನ ವರ್ಷ ರೂ.4 ಕೋಟಿಯಷ್ಟು ನಷ್ಟ ಆಗಿದೆ. ಈ ವರ್ಷ ರೂ. 1 ಕೋಟಿಗೂ ಅಧಿಕ ನಷ್ಟ ಸಂಭವಿಸುವ ಸಾಧ್ಯತೆ ಇದೆ. ಇದನ್ನು ತಡೆಯಲು ಮಾರುಕಟ್ಟೆಯನ್ನು ವೃದ್ಧಿಸುವುದೊಂದೇ ದಾರಿ ಎಂದರು.
ಹಾಲು, ಹಾಲಿನ ಹುಡಿ, ಇತರೆ ಉತ್ಪನ್ನಗಳನ್ನು ಹೊರತು ಪಡಿಸಿ ಹೊರರಾಜ್ಯಗಳಿಗೆ ನಂದಿನಿ ಹಾಲನ್ನು ಪೂರೈಕೆ ಮಾಡಲಾಗುತ್ತದೆ. ತಮಿಳುನಾಡು, ಮಹಾರಾಷ್ಟ್ರ ಮೊದಲಾದ ರಾಜ್ಯಗಳಿಗೆ ಹಾಲು ವಿತರಣೆ ಆಗುತ್ತಿದ್ದು, ಮಾರುಕಟ್ಟೆಯನ್ನು ವಿಸ್ತರಿಸುವ ಎಲ್ಲ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದರು.
ಸಂಘದ ನಿರ್ದೇಶಕರಾದ ನಾರಾಯಣ ಪ್ರಕಾಶ್, ಪದ್ಮನಾಭ ಅರ್ಕಜೆ, ಬಿ. ನಿರಂಜನ, ಎಂಡಿ ಡಾ. ಬಿ.ವಿ. ಸತ್ಯನಾರಾಯಣ, ವ್ಯವಸ್ಥಾಪಕರಾದ ಡಾ. ನಿತ್ಯಾನಂದ ಭಕ್ತ, ಶಿವಶಂಕರ ಸ್ವಾಮಿ ಉಪಸ್ಥಿತರಿದ್ದರು.
ಸಂಘದ ನಿರ್ದೇಶಕ ಕೆ. ಸೀತಾರಾಮ ರೈ ಸವಣೂರು ಸ್ವಾಗತಿಸಿದರು. ಉಪವ್ಯವಸ್ಥಾಪಕ ಡಾ. ರಾಮಕೃಷ್ಣ ಭಟ್ ನಿರೂಪಿಸಿ, ವಂದಿಸಿದರು.







