ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಪರಿಚಯಿಸಿಕೊಂಡು ಲಕ್ಷಾಂತರ ರೂ. ವಂಚನೆ
ಮಂಗಳೂರು, ಜೂ.22: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ತನ್ನನ್ನು ಜಾಕ್ ಕೊಲೇಮನ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯೋರ್ವನು ಮಹಿಳೆಗೆ 16,69,000 ರೂ. ವಂಚಿಸಿದ ಬಗ್ಗೆ ವರದಿಯಾಗಿದೆ.
ರೇಷ್ಮಾ ಫೆರಾವೊ ವಂಚನೆಗೊಳಗಾದ ಮಹಿಳೆ ಎಂದು ತಿಳಿದುಬಂದಿದೆ.
ಫೇಸ್‌ಬುಕ್‌ನಲ್ಲಿ ಮೇ 3ರಂದು ರೇಷ್ಮಾ ಫೆರಾವೊ ಅವರನ್ನು ಪರಿಚಯಿಸಿಕೊಂಡ ಜಾಕ್ ಕೊಲೇಮನ್ ಬೆಲೆಬಾಳುವ ವಸ್ತು ಮತ್ತು 20 ಸಾವಿರ ಪೌಂಡ್ ಹಣ ಇರುವ ಪಾರ್ಸೆಲ್‌ನ್ನು ಕಳುಹಿಸುವುದಾಗಿ ತಿಳಿಸಿದ್ದಾನೆ. ಇದಕ್ಕೆ ಮೊದಲಿಗೆ ನಿರಾಕರಿಸಿದ ರೇಷ್ಮಾ ಫೆರಾವೊ ನಂತರ ಅವರ ಒತ್ತಾಯಕ್ಕೆ ಮಣಿದು, ಒಪ್ಪಿಕೊಂಡಿದ್ದಾರೆ. ಬಳಿಕ ಮೇ 9ರಂದು ವ್ಯಕ್ತಿಯೋರ್ವ ಫೆರಾವೊ ಅವರಿಗೆ ಕರೆ ಮಾಡಿ ಪಾರ್ಸೆಲ್‌ವೊಂದು ನ್ಯೂ ಡೆಲ್ಲಿ ಏರ್‌ಪೋರ್ಟ್‌ನಲ್ಲಿದ್ದು, ಇದಕ್ಕೆ ದಂಡ ಕಟ್ಟಬೇಕು. ಇಲ್ಲದಿದ್ದರೆ ತಮ್ಮನ್ನು ಬಂಧಿಸಲಾಗುವುದು ಎಂದು ಹೇಳಿದ್ದಾನೆ.
ಇದನ್ನು ನಂಬಿದ ಫೆರಾವೊ ವಿವಿಧ ಕಾರಣಕ್ಕಾಗಿ ಹಲವು ಬಾರಿ ಹಣವನ್ನು ನೆಫ್ಟ್ ಮೂಲಕ ಒಟ್ಟು 16,69,000 ರೂ.ನ್ನು ಕಳುಹಿಸಿದ್ದಾರೆ. ಈ ರೀತಿ ಜಾಕ್ ಕೊಲೇಮನ್‌ಮಹಿಳೆಗೆ ವಂಚಿಸಿದ್ದಾನೆ ಎಂದು ತಿಳಿದುಬಂದಿದೆ.
ಈ ಕುರಿತು ನಗರದ ಸೈಬರ್ ಕ್ರೈಮ್ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





