ಭಾರೀ ರೈಲು ದುರಂತವನ್ನು ತಪ್ಪಿಸಿ 2,000 ಜೀವಗಳನ್ನು ರಕ್ಷಿಸಿದ ತಂದೆ-ಮಗಳು

ಸಾಂದರ್ಬಿಕ ಚಿತ್ರ
ಅಗರ್ತಲಾ,ಜೂ.22: ಉತ್ತರ ತ್ರಿಪುರಾದಲ್ಲಿ ಸಂಭಾವ್ಯ ಭಾರೀ ರೈಲು ದುರಂತವನ್ನು ತಪ್ಪಿಸುವ ಮೂಲಕ ಬುಡಕಟ್ಟು ಜನಾಂಗಕ್ಕೆ ಸೇರಿದ ತಂದೆ-ಮಗಳು ಅಸಾಧಾರಣ ಸಮಯಪ್ರಜ್ಞೆಯನ್ನು ಮೆರೆದು 2,000 ಜನರ ಜೀವಗಳನ್ನು ಉಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಜೂ.15ರಂದು ಈ ಘಟನೆ ನಡೆದಿದೆ.,ಉತ್ತರ ತ್ರಿಪುರಾದ ಧಂಚರಾ ಗ್ರಾಮದ ನಿವಾಸಿ ಸ್ವಪನ್ ದೆಬ್ಬಾರ್ಮಾ ಮತ್ತು ಆತನ ಪುತ್ರಿ ಸೋಮತಿ ಧಲಾಯಿ ಜಿಲ್ಲೆಯ ಅಥರಮುರಾ ಗುಡ್ಡದಿಂದ ಕೆಳಗಿಳಿದು ಬರುತ್ತಿದ್ದಾಗ ಪ್ಯಾಸೆಂಜರ್ ರೈಲೊಂದು ಹಳಿಗಳೇ ಇಲ್ಲದ ತಾಣದತ್ತ ವೇಗವಾಗಿ ಧಾವಿಸುತ್ತಿದ್ದನ್ನು ಕಂಡಿದ್ದರು. ಆ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದು,ಭೂಕುಸಿತದಿಂದ ಹಳಿಗಳು ಸ್ಥಳದಲ್ಲಿರಲಿಲ್ಲ. ರೈಲು ಅಗರ್ತಲಾದಿಂದ ಧರ್ಮನಗರಕ್ಕೆ ಪ್ರಯಾಣಿಸುತ್ತಿತ್ತು. ಸಂಭಾವ್ಯ ಅಪಾಯವನ್ನು ಗ್ರಹಿಸಿದ ಸ್ವಪನ್ ಓಡುತ್ತ ರೈಲುಹಳಿಗಳನ್ನು ತಲುಪಿ ತನ್ನ ಶರ್ಟ್ನ್ನು ತೆಗೆದು ಜೋರಾಗಿ ಬೀಸತೊಡಗಿದ್ದ. ಆತನ ಮಗಳೂ ಹಳಿಗಳ ಮೇಲೆ ನಿಂತು ಅಪ್ಪನೊಂದಿಗೆ ಕೈಜೋಡಿಸಿದ್ದಳು. ರೈಲಿನ ಚಾಲಕನ ಗಮನವನ್ನು ಸೆಳೆಯಲು ಅವರು ಮಾಡಿದ್ದ ಪ್ರಯತ್ನ ಯಶಸ್ವಿಯಾಗಿತ್ತು.
“ನಾವು ಸ್ವಪನ್ ನೀಡುತ್ತಿದ್ದ ಸಂಕೇತವನ್ನು ಗುರುತಿಸಿ ರೈಲನ್ನು ನಿಲ್ಲಿಸಿರದಿದ್ದರೆ ಅದು ಭಾರೀ ಅಪಘಾತಕ್ಕೆ ಗುರಿಯಾಗುತ್ತಿತ್ತು” ಎಂದು ರೈಲಿನ ಚಾಲಕ ಸೋನುಕುಮಾರ ಮಂಡಲ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಸ್ವಪನ್ ಬುಡಕಟ್ಟು ಜನಾಂಗಕ್ಕೆ ಸೇರಿದ್ದು,ಮಗಳೊಂದಿಗೆ ಸೇರಿ ಉರುವಲು ಕಟ್ಟಿಗೆ ಮತ್ತು ಬಿದಿರು ಇತ್ಯಾದಿ ಅರಣ್ಯ ಉತ್ಪನ್ನಗಳನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಕಡುಬಡತನದಲ್ಲಿರುವ ತನ್ನ ಕುಟುಂಬದ ಆರು ಜನರ ತುತ್ತಿನ ಚೀಲಗಳನ್ನು ತುಂಬುತ್ತಿದ್ದಾನೆ.
ಅಸಾಧಾರಣ ಸಮಯಪ್ರಜ್ಞೆ ಮತ್ತು ಸಾಹಸವನ್ನು ಮೆರೆದು ಅಮೂಲ್ಯ ಜೀವಗಳನ್ನು ರಕ್ಷಿಸಿರುವ ಸ್ವಪನ್ ಮತ್ತು ಸೋಮತಿಗೆ ಹಣಕಾಸು ನೆರವು ಮತ್ತು ಪುರಸ್ಕಾರ ನೀಡುವಂತೆ ತನ್ನ ಸರಕಾರವು ಕೇಂದ್ರ ರೈಲ್ವೆ ಸಚಿವಾಲಯಕ್ಕೆ ಶಿಫಾರಸು ಮಾಡಲಿದೆ ಎಂದು ಮುಖ್ಯಮಂತ್ರಿ ಬಿಪ್ಲಬ್ ದೇಬ್ ಅವರು ತ್ರಿಪುರಾ ವಿಧಾನಸಭೆಯಲ್ಲಿ ತಿಳಿಸಿದರು. ನಾರ್ಥ್ ಈಸ್ಟ್ ಫ್ರಾಂಟಿಯರ್ ರೈಲು ಕೂಡ ಸ್ವಪನ್ಗೆ ಪುರಸ್ಕಾರದ ಭರವಸೆ ನೀಡಿದೆ.







