ಚಿಕ್ಕಮಗಳೂರು: ಗ್ರಾಪಂ ನೌಕರರ ಫೆಡರೇಶನ್, ಎಐಟಿಯುಸಿ ವತಿಯಿಂದ ಧರಣಿ

ಚಿಕ್ಕಮಗಳೂರು, ಜೂ.22: ಗ್ರಾಮ ಪಂಚಾಯತ್ ನೌಕರರಿಗೆ ರಾಜ್ಯ ಸರಕಾರ ಹಲವಾರು ಯೋಜನೆಗಳನ್ನು ಜಾರಿ ಮಾಡಿದ್ದು, ಅದರಂತೆ ಸರಕಾರಿ ಆದೇಶವನ್ನು ಜಾರಿ ಮಾಡುವಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಗ್ರಾಪಂಗಳು ನಿರ್ಲಕ್ಷ್ಯ ವಹಿಸಿವೆ ಎಂದು ಆರೋಪಿಸಿ ಜಿಲ್ಲಾ ಗ್ರಾಪಂ ನೌಕರರ ಫೆಡರೇಶನ್ ಹಾಗೂ ಎಐಟಿಯುಸಿ ನೇತೃತ್ವದಲ್ಲಿ ನೂರಾರು ನೌಕರರು ಧರಣಿ ನಡೆಸಿ, ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಪಂ ನೌಕರರ ಫೆಡರೇಶನ್ ನಡೆಸಿದ ಸತತ ಹೋರಾಟಗಳ ಫಲವಾಗಿ ಹಿಂದಿನ ರಾಜ್ಯ ಸರಕಾರ ನೌಕರರ ಕ್ಷೇಮಾಭಿವೃದ್ಧಿ ಹಲವಾರು ಯೋಜನೆಗಳ ಜಾರಿಗೆ ಆದೇಶ ನೀಡಿದೆ. ಅದರಂತೆ ಗ್ರಾಪಂ ನೌಕರರಿಗೆ ನೇರ ಸಂಬಳ ಯೋಜನೆಯನ್ನು ಜಾರಿ ಮಾಡಿದ್ದು, ಇದನ್ನು ಯಶಸ್ವಿಗೊಳಿಸಲು ನೌಕರರ ಬ್ಯಾಂಕ್ ಖಾತೆಗಳ ವಿವರಗಳನ್ನು ಸರಕಾರಕ್ಕೆ ಸಲ್ಲಿಸಬೇಕಿದೆ. ಆದರೆ ಈ ವಿವರಗಳನ್ನು ಸರಕಾರಕ್ಕೆ ನೀಡುವಲ್ಲಿ ಜಿಲ್ಲಾ ಪಂಚಾಯತ್ ವಿಫಲವಾಗಿದೆ. ಜಿಪಂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಈ ನಿರ್ಲಕ್ಷ್ಯದಿಂದಾಗಿ ಜಿಲ್ಲೆಯ ಎಲ್ಲ ಗ್ರಾಪಂಗಳ ಸಾವಿರಾರು ನೌಕರರು ನೇರ ವೇತನದಿಂದ ವಂಚಿತರಾಗಿದ್ದಾರೆಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಪಂ ನೌಕರರ ಪೈಕಿ ಕೆಲವರು ನಿವೃತ್ತಿಯ ಅಂಚಿನಲ್ಲಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಸರಕಾರದ ಯಾವುದೇ ಸವಲತ್ತುಗಳು ಗ್ರಾಪಂ ನೌಕರರಿಗೆ ಸಿಗದಂತಾಗಿದೆ. ಸರಕಾರದ ಕಾರ್ಯಸೂಚಿಯಂತೆ ಯಾವುದೇ ಅನುಮೋದನೆ ಪ್ರಕ್ರಿಯೆ ನಡೆಯುತ್ತಿಲ್ಲ. ಕರ್ತವ್ಯದ ವೇಳೆ ನೌಕರರು ಅಪಘಾತಕ್ಕೀಡಾದಲ್ಲಿ ಯಾವುದೇ ವಿಮಾ ಸೌಲಭ್ಯ, ಪರಿಹಾರ ಸಿಗುತ್ತಿಲ್ಲ. ನಿವೃತ್ತರಾದ ನೌಕರರಿಗೆ ನೀಡಬೇಕಾದ ಉಪಧನಗಳಿಂದ ವಂಚಿಸಲಾಗುತ್ತಿದೆ. ಜಿಲ್ಲೆಯ ಕೆಲ ಗ್ರಾಪಂ ಗಳಲ್ಲಿ ಕೇವಲ 2000 ರೂ.ವೇತನಕ್ಕೆ ಸಿಬ್ಬಂದಿಯನ್ನು ದುಡಿಸಿಕೊಳ್ಳಲಾಗುತ್ತಿದೆ ಎಂದು ಈ ವೇಳೆ ಧರಣಿ ನಿರತರು ಅಳಲು ತೋಡಿಕೊಂಡರು.
ಈ ಹಿಂದೆ ಗ್ರಾಪಂ ನೌಕರರ ಸಮಸ್ಯೆಗಳ ಬಗ್ಗೆ ಜಿಪಂ ಸಿಇಒ, ನೌಕರರ ಸಂಘದ ಪದಾಧಿಕಾರಿಗಳು, ಪಿಡಿಒ, ಇಒ ಅವರು ಜಂಟಿ ಸಭೆ ನಡೆಸಿ ಪರಿಹಾರ ಕ್ರಮ ಕೈಗೊಳ್ಳಲಾಗುತ್ತಿತ್ತು. ಈ ಪ್ರಕ್ರಿಯೆಗಳನ್ನು ಮುಂದುವರಿಸಬೇಕೆಂದು ಆಗ್ರಹಿಸಿದ ಅವರು, ನೇರ ಸಂಬಳ ಯೋಜನೆ ಜಾರಿಗೆ ಬರುತ್ತಿರುವುದರಿಂದ ನೌಕರರ ಮೇಲೆ ಸುಳ್ಳು ಆಪಾದನೆಯಡಿ ಸಿಕ್ಕಿಸಿ ವಜಾ ಮಾಡುತ್ತಿರುವದಲ್ಲದೇ, ಹಣಕ್ಕಾಗಿ ಬೇಕಾದವರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳುವ ದಂಧೆ ಜಿಲ್ಲೆಯ ಕೆಲ ಗ್ರಾಪಂಗಳಲ್ಲಿ ನಡೆದಿದ್ದು, ಇದಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.
ನೌಕರರ ಮೇಲೆ ನಿಯಂತ್ರಣ ಸಾಧಿಸುವ ಅಧಿಕಾರಿಗಳು ಸರಕಾರ ಜಾರಿ ಮಾಡಿದ ಆದೇಶಗಳನ್ನು ಪಾಲಿಸುತ್ತಿಲ್ಲ. ಆದ್ದರಿಂದ ಅಧಿಕಾರಿಗಳು ನೌಕರರ ಸಮಸ್ಯೆಗಳಿಗೆ ಸ್ಪಂದಿಸಿ, ನೌಕರರ ಅನುಮೋದನೆ, ಮುಂಭಡ್ತಿ, ಕನಿಷ್ಠ ವೇತನ, ರಜೆ, ಸಲಕರಣೆಗಳು ಮತ್ತು ಸಮವಸ್ತ್ರ ಒದಗಿಸಬೇಕು. ಎಸ್.ಆರ್.ಪುಸ್ತಕ ತೆರೆಯುವುದೂ ಸೇರಿದಂತೆ ವೈದ್ಯಕೀಯ ವೆಚ್ಚ, ಉಪಾನುದಾನಗಳನ್ನು ಒದಗಿಸುವ ಸರಕಾರಿ ಆದೇಶಗಳನ್ನು ಕೂಡಲೇ ಜಾರಿ ಮಾಡಬೇಕು. ಈ ಸಂಬಂಧ ಅಧಿಕಾರಿಗಳು ಮತ್ತು ಸಂಘದ ಪದಾಧಿಕಾರಿಗಳ ಜಂಟಿ ಸಭೆ ನಡೆಸಿ ನೌಕರರನ್ನು ಇಎಸ್‍ಐ ವ್ಯಾಪ್ತಿಗೊಳಪಡಿಸಲು ಸರಕಾರಕ್ಕೆ ಶಿಫಾರಸು ಮಾಡಬೇಕೆಂದು ಇದೇ ವೇಳೆ ಧರಣಿ ನಿರತರು ಆಗ್ರಹಿಸಿದರು.
ನಂತರ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಸಿಇಒ ಅವರಿಗೆ ಸಲ್ಲಿಸಲಾಯಿತು. ಎಐಟಿಯುಸಿ ರಾಜ್ಯ ಪ್ರಧಾನ ಕಾಯದರ್ಶಿ ವಿಜಯ್‍ಕುಮಾರ್, ಉಪಾಧ್ಯಕ್ಷ ದೇವರಾಜ್, ಗ್ರಾಪಂ ನೌಕರರ ಫೆಡರೇಶನ್‍ನ ಸಂಚಾಲಕರಾದ ರಾಜು, ಅಪ್ಪು, ನೇತ್ರಾ ಧರಣಿಯ ನೇತೃತ್ವ ವಹಿಸಿದ್ದರು. ಜಿಲ್ಲೆಯ ವಿವಿಧ ಗ್ರಾಪಂಗಳ ನೂರಾರು ನೌಕರರು ಧರಣಿಯಲ್ಲಿ ಭಾಗವಹಿಸಿದ್ದರು.







