ತಿಂಗಳಿಗೊಮ್ಮೆ ಪ್ರತಿ ಹೋಬಳಿ ಕೇಂದ್ರದಲ್ಲಿ ಜನತಾ ದರ್ಶನ: ಶಾಸಕ ಗೌರಿ ಶಂಕರ್

ತುಮಕೂರು,ಜೂ.23: ಮುಂಬರುವ ದಿನಗಳಲ್ಲಿ ಗ್ರಾಮಾಂತರ ಕ್ಷೇತ್ರದ ಪ್ರತಿ ಹೋಬಳಿ ಕೇಂದ್ರದಲ್ಲಿ ತಿಂಗಳಿಗೊಮ್ಮೆ ಜನತಾ ದರ್ಶನ ನಡೆಸಲು ತೀರ್ಮಾನಿಸಿರುವುದಾಗಿ ಶಾಸಕ ಡಿ.ಸಿ.ಗೌರಿಶಂಕರ್ ತಿಳಿಸಿದ್ದಾರೆ.
ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಊರ್ಡಿಗೆರೆಯಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಹಾಗೂ ಇಲಾಖೆ ನಡಿಗೆ ರೈತರ ಮನೆ ಬಾಗಿಲಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು, ಪ್ರತಿ ತಿಂಗಳ ಎರಡು ಅಥವಾ ಮೂರನೇ ವಾರದಂದು ಹೋಬಳಿ ಕೇಂದ್ರಗಳಲ್ಲಿ ಜನತಾದರ್ಶನ ನಡೆಸಲು ಯೋಜನೆ ರೂಪಿಸಲಾಗಿದೆ. ಎಲ್ಲಾ ಅಧಿಕಾರಿಗಳನ್ನು ಒಂದೇ ವೇದಿಕೆಯಡಿ ತಂದು ರೈತರು, ಬಡವರು, ನಿರ್ಗತಿಕರು, ನಿರಾಶ್ರಿತರು,ವಿಧವೆಯರು,ಅಂಗವಿಕಲರಿಗೆ ಸ್ಥಳದಲ್ಲೇ ಮಾಸಾಶನ ಹಾಗೂ ಇತರೆ ಸೌಲಭ್ಯ ದೊರಕುವಂತೆ ವ್ಯವಸ್ಥೆ ಮಾಡಲಾಗುವುದು. ಕಂದಾಯ ಇಲಾಖೆಯ ಅಧಿಕಾರಿಗಳು ರೈತರೊಂದಿಗೆ ಸ್ಥಳದಲ್ಲೇ ಸಮಾಲೋಚನೆ ನಡೆಸಿ ಭೂದಾಖಲೆಗಳಿಗೆ ಸಂಬಂಧಿಸಿದ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲು ನಿರ್ದೇಶಿಸಿರುವುದಾಗಿ ತಿಳಿಸಿದರು.
ಅಧಿಕಾರಿಗಳು ಯಾವುದೇ ಕಡತಗಳನ್ನು ತ್ವರಿತವಾಗಿ ವಿಲೇವಾರಿ ಮಾಡದೆ ವಿಳಂಬ ನೀತಿ ಅನುಸರಿಸಿದರೆ ಶಿಸ್ತುಕ್ರಮ ಜರುಗಿಸಲಾಗುವುದು. ಅಂದಿನ ಕಡತಗಳು ಅಂದೇ ವಿಲೇವಾರಿಯಾಗಬೇಕು. ರೈತರಿಗೆ ಸಂಬಂಧಿಸಿದ ಯಾವುದೇ ಕಡತಗಳ ವಿಲೇವಾರಿಯಲ್ಲಿ ಅಧಿಕಾರಿಗಳು ವಿಳಂಬ ನೀತಿ ಅನುಸರಿಸಿ ರೈತರನ್ನು ವಿನಾಕಾರಣ ಕಚೇರಿಗೆ ಅಲೆಸಿದರೆ ಅಂತಹ ಅಧಿಕಾರಿಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದರು.
ಕೃಷಿ ಹಾಗೂ ತೋಟಗಾರಿಕಾ ಹಾಗೂ ಇತರೆ ಇಲಾಖೆ ವ್ಯಾಪ್ತಿಯಡಿಯಲ್ಲಿ ರೈತರಿಗೆ ಸಬ್ಸಿಡಿ ದರದಲ್ಲಿ ವಿತರಿಸುತ್ತಿರುವ ತುಂತುರು ನೀರಾವರಿ ಸಲಕರಣೆ ಕೃಷಿ ಉಪಕರಣಗಳು, ಕಳಪೆ ಗುಣಮಟ್ಟದಿಂದ ಕೂಡಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಕೆಲ ಭಾಗದಲ್ಲಿ ಹಳೇ ಪರಿಕರಗಳಿಗೆ ಬಣ್ಣ ಬಳಿದು ಅಧಿಕಾರಿಗಳು ವಿತರಿಸಿರುವ ಬಗ್ಗೆ ಗಂಭೀರ ಅಪಾಧನೆಗಳಿವೆ. ಶೀಘ್ರದಲ್ಲೇ ಈ ಬಗ್ಗೆ ಮಾಹಿತಿ ಕಲೆಹಾಕಿ ರೈತರ ವಿಚಾರವಾಗಿ ಲೋಪ ಮಾಡಿರುವ ಅಧಿಕಾರಿಗಳಿಗೆ ತಕ್ಕ ಶಾಸ್ತ್ರಿ ಮಾಡುವುದಾಗಿ ತಿಳಿಸಿದರು.
ಇದೇ ವೇಳೆ ಊರ್ಡಿಗೆರೆ ಭಾಗದ ಅಂಗವಿಕಲರಿಗೆ ಹಾಗೂ ವಿಧವೆಯರಿಗೆ ಶಾಸಕರು ಮಾಶಾಸನ ಪತ್ರ ವಿತರಿಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯ ವೈ.ಹೆಚ್.ಹುಚ್ಚಯ್ಯ, ತಾ.ಪಂ.ಇಓ ಡಾ.ನಾಗಣ್ಣ, ತಾಲೂಕು ಜೆಡಿಎಸ್ ಯುವ ಅಧ್ಯಕ್ಷ ಸುವರ್ಣಗಿರಿ ಕುಮಾರ್, ತಾಲೂಕು ಎಸ್.ಸಿ.ಘಟಕದ ಅಧ್ಯಕ್ಷ ಹರಳೂರು ಸುರೇಶ್, ತಾ.ಪಂ. ಸದಸ್ಯ ರವಿ, ಊರ್ಡಿಗೆರೆ ಜೆಡಿಎಸ್ ಮುಖಂಡ ಅರುಣ್‍ಕುಮಾರ್, ಕೃಷಿ ಇಲಾಖೆ, ಕಂದಾಯ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು,ರೈತರು ಉಪಸ್ಥಿತರಿದ್ದರು.







