ಉಡುಪಿ ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಿಸುವುದು ಅತಿ ಅಗತ್ಯ: ಲೋಕಾಯುಕ್ತ ನ್ಯಾ.ವಿಶ್ವನಾಥ ಶೆಟ್ಟಿ

ಉಡುಪಿ, ಜೂ.23: ಉಡುಪಿ ಜಿಲ್ಲಾಸ್ಪತ್ರೆ ಹಾಗೂ ವೈದ್ಯರ ಸೇವೆಯಲ್ಲಿ ಯಾವುದೇ ಗಂಭೀರವಾದ ಸಮಸ್ಯೆಗಳು ಕಂಡು ಬಂದಿಲ್ಲ. ಮೂಲಭೂತ ಸೌಕರ್ಯ, ವೈದ್ಯರು ಮತ್ತು ಸಿಬ್ಬಂದಿಗಳ ಕೊರತೆಗಳಿವೆ. ಬಡವರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಈ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಅಗತ್ಯ ಇದೆ ಎಂದು ಲೋಕಾಯುಕ್ತ ನ್ಯಾಯಾಮೂರ್ತಿ ವಿಶ್ವನಾಥ್ ಶೆಟ್ಟಿ ಹೇಳಿದ್ದಾರೆ.
ಅಜ್ಜರಕಾಡಿನಲ್ಲಿರುವ ಉಡುಪಿ ಜಿಲ್ಲಾಸ್ಪತ್ರೆಗೆ ಶನಿವಾರ ಬೆಳಗ್ಗೆ ದಿಢೀರ್ ಭೇಟಿ ನೀಡಿ ವಿವಿಧ ವಿಭಾಗಗಳನ್ನು ಪರಿಶೀಲಿಸಿ, ವೈದ್ಯರು ಹಾಗೂ ರೋಗಿ ಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡುತಿದ್ದರು.
1962ರಲ್ಲಿ ನಾನು ಕಾಲೇಜು ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಅಜ್ಜರ ಕಾಡು ಆಸ್ಪತ್ರೆ ಉದ್ಘಾಟನೆಗೊಂಡಿತ್ತು. ಅದಕ್ಕೆ ನಾನು ಬಂದಿದ್ದೆ. ಇದೀಗ 55 ವರ್ಷಗಳಲ್ಲಿ ಈ ಆಸ್ಪತ್ರೆ ಎಷ್ಟು ಅಭಿವೃದ್ಧಿ ಆಗಬೇಕಾಗಿತ್ತೋ ಅಷ್ಟು ಆಗಿಲ್ಲ. ಅದಕ್ಕೆ ಸರಕಾರ ಹಾಗೂ ಸಂಬಂಧಪಟ್ಟವರು ಗಮನ ಹರಿಸಬೇಕಾಗಿದೆ ಎಂದರು.
ಬಡವರಿಗೆ ಆರೋಗ್ಯ ಮತ್ತು ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಕುರಿತು ನಾನು ಹೆಚ್ಚು ಗಮನ ಕೊಡುತ್ತಿದ್ದೇನೆ. ಅದರಂತೆ ರಾಜ್ಯದ ಹೆಚ್ಚಿನ ಸರಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ಆರೋಗ್ಯ ಸೇವೆ ಕುರಿತು ಪರಿಶೀಲನೆ ಮಾಡುತ್ತಿದ್ದೇನೆ. ಸ್ವತಃ ನಾನೇ ಹೋಗುವುದರಿಂದ ಅಲ್ಲಿನ ಕುಂದು ಕೊರತೆ ತಿಳಿದುಕೊಳ್ಳಬಹುದು ಮತ್ತು ಅದನ್ನು ಸರಕಾರದ ಗಮನಕ್ಕೆ ತರಲು ಸಾಧ್ಯವಾಗುತ್ತದೆ ಎಂದರು.
ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಒಂದು ಸರಕಾರಿ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬಂದರೆ ಅವರಿಗೆ ಅಲ್ಲಿನ ವೈದ್ಯರ ಮೇಲೆ ವಿಶ್ವಾಸ ಇದೆ ಮತ್ತು ಅವರು ಒಳ್ಳೆಯ ಚಿಕಿತ್ಸೆ ನೀಡುತ್ತಿದ್ದಾರೆ ಎಂದೇ ಅರ್ಥ. ಖಾಸಗಿ ಆಸ್ಪತ್ರೆಯಲ್ಲಿ ಒಬ್ಬ ವೈದ್ಯ 10 ಮಂದಿ ರೋಗಿಗಳಿಗೆ ಚಿಕಿತ್ಸೆ ನೀಡಿದರೆ, ಅದೇ ಒಬ್ಬ ಸರಕಾರಿ ಆಸ್ಪತ್ರೆಯ ವೈದ್ಯರು 100ಕ್ಕಿಂತ ಹೆಚ್ಚು ಮಂದಿ ರೋಗಿಗಳನ್ನು ಪರೀಕ್ಷಿಸುತ್ತಾನೆ. ಹಾಗಾಗಿ ಸರಕಾರಿ ಆಸ್ಪತ್ರೆಯ ವೈದ್ಯರು ಹೆಚ್ಚು ಒತ್ತಡದಿಂದ ಕೆಲಸ ಮಾುತ್ತಾರೆ ಎಂದು ಅವರು ಹೇಳಿದರು.
ಜನರಿಗೆ ಅತಿ ಅಗತ್ಯ ಇರುವ ಸರಕಾರಿ ಆಸ್ಪತ್ರೆಯನ್ನು ಬಲಪಡಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಸಣ್ಣ ಸಣ್ಣ ಸಮಸ್ಯೆಯನ್ನು ದೊಡ್ಡದು ಮಾಡಿ ಸರಕಾರಿ ಆಸ್ಪತ್ರೆಯಲ್ಲಿ ಏನು ಇಲ್ಲ ಎಂಬ ಭಾವನೆ ಮೂಡಿಸುವ ಬದಲು ಆಸ್ಪತ್ರೆಯ ಬಗ್ಗೆ ಜನರಿಗೆ ವಿಶ್ವಾಸ ಮೂಡಿಸುವ ಕೆಲಸವನ್ನು ಸಾಮಾಜಿಕ ಕಳಕಳಿ ಹೊಂದಿ ರುವವರು ಮಾಡಬೇಕು. ಇದರಲ್ಲಿ ಮಾಧ್ಯಮದವರ ಸಹಕಾರ ಕೂಡ ತುಂಬಾ ಅಗತ್ಯ ಎಂದು ಅವರು ತಿಳಿಸಿದರು.
ಸರಕಾರಿ ಆಸ್ಪತ್ರೆಯಲ್ಲಿ ಒಂದು ಬಾರಿ ಒಬ್ಬರಿಗೆ ತೊಂದರೆ ಆಗಿರುವುದನ್ನೇ ಹೆಚ್ಚು ಬಿಂಬಿಸುವುದು ಸರಿಯಲ್ಲ. ಸರಕಾರಿ ಆಸ್ಪತ್ರೆಯ ವೈದ್ಯರಿಂದ ಯಾವುದೇ ತೊಂದರೆ ಆದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಅದನ್ನು ಸುಧಾರಣೆ ಮಾಡುವ ಪ್ರಯತ್ನ ಮಾಡಬೇಕು. ವೈದ್ಯರ ಕೊರತೆ ನೀಗಿಸುವ ಕುರಿತು ಸಂಬಂಧಪಟ್ಟವರು ಗಮನ ಹರಿಸಬೇಕು ಎಂದು ಲೋಕಾಯುಕ್ತ ನ್ಯಾ.ವಿಶ್ವನಾಥ ಶೆಟ್ಟಿ ಹೇಳಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತರು ಆಸ್ಪತ್ರೆಯ ಔಷಧಾಲಯ, ಟೆಲಿ ಮೆಡಿಸಿನ್ ಕೇಂದ್ರ, ರೋಗಿಗಳ ವಾರ್ಡ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.
‘ಗುಣಮುಖ ಆಗುವ ಮೊದಲೇ ಕೆಲಸ ಆರಂಭ’
ನಾನು ಇನ್ನೂ ಕೂಡ ಸಂಪೂರ್ಣ ಗುಣಮುಖ ಆಗಿಲ್ಲ. ಆದರೆ ಲೋಕಾಯುಕ್ತ ಸಂಸ್ಥೆ ಖಾಲಿಯಾಗಿದೆ ಎಂಬ ಭಾವನೆ ಜನರಲ್ಲಿ ಬರಬಾರದೆಂಬ ಉದ್ದೇಶದಿಂದ ಸಂಪೂರ್ಣ ಗುಣಮುಖನಾಗುವ ಮೊದಲೇ ಕೆಲಸ ಆರಂಭಿಸಿದ್ದೇನೆ ಎಂದು ಲೋಕಾಯುಕ್ತ ನ್ಯಾಯಾಮೂರ್ತಿ ವಿಶ್ವನಾಥ್ ಶೆಟ್ಟಿ ತಿಳಿಸಿದ್ದಾರೆ.ಲೋಕಾಯುಕ್ತ ಸಂಸ್ಥೆಗೆ ಹೆಚ್ಚು ಶಕ್ತಿ ತುಂಬುವ ವಿಚಾರದ ಕುರಿತು ನಾನು ಯಾರಲ್ಲಿಯೂ ಬೇಡಿಕೊಂಡು ಹೋಗಲ್ಲ. ಅದನ್ನು ಬಲ ಪಡಿಸಬೇಕೆಂದು ಸರಕಾರಕ್ಕೆ ಇಚ್ಛಾಶಕ್ತಿ ಇದ್ದರೆ ಬಲಪಡಿಸುತ್ತಾರೆ. ಆದರೆ ನಾನು ನನ್ನ ಸಾಮರ್ಥ್ಯಕ್ಕೆ ಮೀರಿ ಕೆಲಸ ಮಾಡುತ್ತಿದ್ದೇನೆ. ಈ ವಿಚಾರ ಕೋರ್ಟ್‌ನಲ್ಲಿ ತೀರ್ಪಿಗೆ ಸಿದ್ದವಾಗಿದೆ. ನಮ್ಮ ಅಭಿಪ್ರಾಯವನ್ನು ವಕೀಲರ ಮೂಲಕ ಕೋರ್ಟಿಗೆ ಮನವರಿಕೆ ಮಾಡಲಾಗಿದೆ. ಇದನ್ನು ಮಾಧ್ಯಮಗ ಮುಂದೆ ಹಂಚಿಕೊಳ್ಳಲ್ಲ ಎಂದರು.







