ಅಪರಾಧಗಳ ತನಿಖೆಗೆ ಆಧಾರ್ ದತ್ತಾಂಶಗಳ ಬಳಕೆ ಮಾಡುವಂತಿಲ್ಲ: ಯುಐಡಿಎಐ

ಹೊಸದಿಲ್ಲಿ,ಜೂ.23: ಅಪರಾಧಗಳನ್ನು ಭೇದಿಸಲು ಪೊಲೀಸರಿಗೆ ಸೀಮಿತ ಪ್ರಮಾಣದಲ್ಲಿ ಆಧಾರ್ ದತ್ತಾಂಶಗಳು ಲಭ್ಯವಾಗಬೇಕು ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ(ಎನ್‌ಸಿಆರ್‌ಬಿ)ವು ಪ್ರತಿಪಾದಿಸಿರುವ ಬೆನ್ನಲ್ಲೇ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ(ಯುಐಡಿಎಐ)ವು,ಆಧಾರ್ ಕಾಯ್ದೆಯ ಸೆಕ್ಷನ್ 29ರಡಿ ಅಪರಾಧ ತನಿಖೆಗಾಗಿ ಆಧಾರ್ ಬಯೊಮೆಟ್ರಿಕ್ ದತ್ತಾಂಶಗಳ ಬಳಕೆಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ.
ಯಾವುದೇ ಅಪರಾಧ ತನಿಖಾ ಸಂಸ್ಥೆಯೊಂದಿಗೆ ಆಧಾರ್ ದತ್ತಾಂಶಗಳನ್ನೆಂದಿಗೂ ಹಂಚಿಕೊಳ್ಳಲಾಗಿಲ್ಲ ಎಂದೂ ಅದು ತಿಳಿಸಿದೆ.
ಮೊದಲ ಬಾರಿಗೆ ಅಪರಾಧಗಳನ್ನು ಎಸಗಿದವರನ್ನು ಪತ್ತೆ ಹಚ್ಚಲು ಮತ್ತು ಅಪರಿಚಿತ ಶವಗಳನ್ನು ಗುರುತಿಸಲು ನೆರವಾಗುವುದಕ್ಕಾಗಿ ಪೊಲೀಸರಿಗೆ ಸೀಮಿತ ಪ್ರಮಾಣದಲ್ಲಿ ಆಧಾರ್ ದತ್ತಾಂಶಗಳನ್ನು ಪಡೆಯಲು ಅವಕಾಶವಿರಬೇಕು ಎಂದು ಎನ್‌ಸಿಆರ್‌ಬಿಯ ನಿರ್ದೇಶಕ ಇಷ್ ಕುಮಾರ ಅವರು ಗುರುವಾರ ಬಲವಾಗಿ ಪ್ರತಿಪಾದಿಸಿದ್ದರು. ಈ ಹಿನ್ನೆಲೆಯಲ್ಲಿ ಯುಐಡಿಎಐ ಹೇಳಿಕೆ ಹೊರಬಿದ್ದಿದೆ.
ಇದಕ್ಕೆ ‘ಅತ್ಯಂತ ಸೀಮಿತ’ ವಿನಾಯಿತಿಯಾಗಿ ಆಧಾರ್ ಕಾಯ್ದೆಯ ಸೆಕ್ಷನ್ 33 ರಾಷ್ಟ್ರೀಯ ಭದ್ರತೆಯನ್ನೊಳಗೊಂಡ ಪ್ರಕರಣಗಳಲ್ಲಿ ಆಧಾರ್ ಬಯೊಮೆಟ್ರಿಕ್ ದತ್ತಾಂಶಗಳ ಬಳಕೆಗೆ ಅವಕಾಶ ನೀಡುತ್ತದೆ ಮತ್ತು ಸಂಪುಟ ಕಾರ್ಯದರ್ಶಿಗಳ ನೇತೃತ್ವದ ಉಸ್ತುವಾರಿ ಸಮಿತಿಯು ಪೂರ್ವಾನುಮತಿ ನೀಡಿದರೆ ಮಾತ್ರ ಇದು ಸಾಧ್ಯ ಎಂದು ಯುಐಡಿಎಐ ತಿಳಿಸಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿರುವ ಆಧಾರ್ ಪ್ರಕರಣದಲ್ಲಿಯೂ ಸರಕಾರವು ಇದೇ ನಿಲುವನ್ನು ವ್ಯಕ್ತಪಡಿಸಿದೆ ಎಂದು ಅದು ಹೇಳಿದೆ.
ಯುಐಡಿಎಐ ಸಂಗ್ರಹಿಸಿರುವ ಬಯೊಮೆಟ್ರಿಕ್ ದತ್ತಾಂಶಗಳನ್ನು ಆಧಾರ್ ಸೃಷ್ಟಿ ಮತ್ತು ಆಧಾರ್ ಹೊಂದಿರುವವರ ಗುರುತು ದೃಢೀಕರಣದ ಉದ್ದೇಶಕ್ಕೆ ಮಾತ್ರ ಬಳಸಬಹುದಾಗಿದೆ ಮತ್ತು ಬೇರೆ ಯಾವುದೇ ಉದ್ದೇಶಕ್ಕಾಗಿ ಬಳಸುವಂತಿಲ್ಲ ಎಂದೂ ಹೇಳಿಕೆಯು ಷ್ಟಪಡಿಸಿದೆ.
ಪ್ರತಿವರ್ಷ ದೇಶದಲ್ಲಿ ಸುಮಾರು 50 ಲಕ್ಷ ಅಪರಾಧ ಪ್ರಕರಣಗಳು ದಾಖಲಾಗುತ್ತವೆ ಮತ್ತು ಹೆಚ್ಚಿನ ಅಪರಾಧಗಳಲ್ಲಿ ಅಪರಾಧಿಗಳು ಮೊದಲ ಬಾರಿಗೆ ಭಾಗಿಯಾಗಿರುತ್ತಾರೆ. ಅವರು ಬಿಟ್ಟಿರುವ ಬೆರಳಚ್ಚುಗಳು ಪೊಲೀಸರ ದಾಖಲೆಗಳಲ್ಲಿ ಇರುವುದಿಲ್ಲ. ಹೀಗಾಗಿ ತನಿಖೆಯ ಉದ್ದೇಶದಿಂದ ಪೊಲೀಸರಿಗೆ ಆಧಾರ್ ದತ್ತಾಂಶಗಳು ಲಭ್ಯವಾಗಬೇಕು ಎಂದು ಇಷ್ ಕುಮಾರ ಪ್ರತಿಪಾದಿಸಿದ್ದರು.







