ಮಕ್ಕಳ ಅಪಹರಣಕಾರ ಎಂಬ ಶಂಕೆಯಿಂದ ವ್ಯಕ್ತಿಯ ಥಳಿಸಿ ಹತ್ಯೆ

ರಾಯ್‌ಪುರ, ಜೂ.23: ಮಕ್ಕಳ ಅಪಹರಣಕಾರ ಎಂಬ ಶಂಕೆಯಿಂದ ಗುಂಪೊಂದು 40 ವರ್ಷದ ವ್ಯಕ್ತಿಯೊಬ್ಬನನ್ನು ಥಳಿಸಿ ಹತ್ಯೆಗೈದ ಘಟನೆ ಛತ್ತೀಸ್‌ಗಢದ ಸರ್ಗುಜಾ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವ್ಯಕ್ತಿಯೋರ್ವ ಸರ್ಗುಜಾ ಜಿಲ್ಲೆಯ ಮೆಂಡ್ರಾಕ್ಲ ಗ್ರಾಮಕ್ಕೆ ಆಗಮಿಸಿದ್ದ. ಅಪರಿಚಿತ ವ್ಯಕ್ತಿಯನ್ನು ಕಂಡ ಸ್ಥಳೀಯರು ಆತನ ಬಗ್ಗೆ ವಿಚಾರಿಸಿದ್ದಾರೆ. ಆದರೆ ಆತ ಯಾವುದೇ ಉತ್ತರ ನೀಡಿಲ್ಲ ಎನ್ನಲಾಗಿದೆ. ಜಿಲ್ಲೆಯಲ್ಲಿ ಮಕ್ಕಳ ಅಪಹರಣಕಾರರು ಸಕ್ರಿಯವಾಗಿದ್ದಾರೆ ಎಂಬ ಗಾಳಿಸುದ್ದಿ ಹಬ್ಬಿದ್ದ ಹಿನ್ನೆಲೆಯಲ್ಲಿ ಈತನನ್ನು ಮಕ್ಕಳ ಅಪಹರಣಕಾರ ಎಂದು ಶಂಕಿಸಿದ ಸ್ಥಳೀಯರು ಒಟ್ಟು ಸೇರಿ ಆತನನ್ನು ಥಳಿಸಿದ್ದು ಆತ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಗ್ರಾಮದ 10 ಮಂದಿಯನ್ನು ಬಂಧಿಸಿದ್ದಾರೆ. ಅಲ್ಲದೆ ಗಾಳಿ ಸುದ್ದಿಗೆ ಕಿವಿಗೊಡಬೇಡಿ ಎಂದು ಗ್ರಾಮಸ್ಥರಿಗೆ ಸೂಚನೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.
Next Story





