ಚಿಕ್ಕಮಗಳೂರು: ಅನ್ವರ್ ಹತ್ಯೆ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಬಿಜೆಪಿ ಧರಣಿ
ಚಿಕ್ಕಮಗಳೂರು ಜೂ.23: ಬಿಜೆಪಿ ಮುಖಂಡ ಮುಹಮ್ಮದ್ ಅನ್ವರ್ ಅವರ ಹತ್ಯೆ ಖಂಡಿಸಿ ಶಾಸಕ ಸಿಟಿ ರವಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ನಗರದ ಆಜಾದ್ ಪಾರ್ಕ್ ಆವರಣದಲ್ಲಿ ಶನಿವಾರ ಧರಣಿ ನಡೆಸಿದರು.
ಈ ವೇಳೆ ಧರಣಿ ನಿರತರನ್ನುದ್ದೇಶಿಸಿ ಮಾತನಾಡಿದ ಶಾಸಕ ಸಿಟಿ ರವಿ, ಮಲೆನಾಡಿನಂತಹ ಶಾಂತ ವಾತಾವರಣದಲ್ಲಿ ನಡೆದ ಅಮಾಯಕ ವ್ಯಕ್ತಿಯ ಬರ್ಬರ ಹತ್ಯೆ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ. ಕರಾವಳಿಯಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದ ಬಗ್ಗೆ ಕೇಳುತ್ತಿದ್ದೆವು. ಆದರೀಗ ಚಿಕ್ಕಮಗಳೂರಿನಲ್ಲೂ ಸುಪಾರಿ ಕಿಲ್ಲರ್ ಗಳ ಹಾವಳಿ ಆರಂಭವಾಗಿರುವುದು ಆಂಕಪಡುವ ಸಂಗತಿ. ಪೊಲೀಸ್ ಇಲಾಖೆ ಇಂತಹ ಘಟನೆಗಳ ಬಗ್ಗೆ ಗಂಭೀರವಾದ ಕ್ರಮ ವಹಿಸಬೇಕು. ಮಲೆನಾಡಿನಲ್ಲಿ ಸಮಾಜ ಘಾತುಕ ಶಕ್ತಿಗಳನ್ನು ತಲೆ ಎತ್ತಲು ಬಿಡಬಾರದು ಎಂದರು.
ಅನ್ವರ್ ಓರ್ವ ಸಮಾಜ ಸೇವಕ. ಅವರಿಗೆ ಸಮಾಜದ ಬಡ ವರ್ಗದವರ ಬಗ್ಗೆ ಅಪಾರ ಕಾಳಜಿ ಇತ್ತು. ಬಿಜೆಪಿ ಪಕ್ಷದಲ್ಲಿದ್ದುಕೊಂಡು ತಮ್ಮ ಸಮುದಾಯದವರಿಗೆ ಕೈಲಾದ ಸಹಾಯ ಮಾಡುತ್ತಿದ್ದರು. ಈ ಹಿಂದೆ ಅವರ ವಿರುದ್ಧ ವಿನಾಕಾರಣ ಹಲ್ಲೆ ಮಾಡಿದ ಆರೋಪಿಗಳು ಜೈಲು ಪಾಲಾಗಿದ್ದು, ಆರೋಪಿಗಳು ಜೈಲಿನಲಲಿದ್ದುಕೊಂಡೇ ಸ್ಕೆಚ್ ಹಾಕಿ ಸುಪಾರಿ ಹಂತಕರ ಮೂಲಕ ಹತ್ಯೆ ಮಾಡಿದ್ದಾರೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಣಿಸಿ ಹಂತಕರನ್ನು ಶೀಘ್ರ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಸಮಾಜ ಘಾತುಕ ಶಕ್ಷಿಗಳು ಮಲೆನಾಡಿಗೂ ಕಾಲಿಟ್ಟಿರುವುದು ಆತಂಕ ಪಡುವ ಸಂಗತಿಯಾಗಿದೆ. ಕೋಮುವಾದಿಗಳು ಸಮಾಜದ ಸಾಮರಸ್ಯ ಬಯಸುವವರನ್ನು ಹುಡುಕಿ ಕೊಲ್ಲುತ್ತಿದ್ದಾರೆ. ಪೊಲೀಸರು ಈ ಬಗ್ಗೆ ಅಗತ್ಯ ಕ್ರಮವಹಿಸಿದಿದ್ದಲ್ಲಿ ರಾಜ್ಯದಾದ್ಯಂತ ಬಿಜೆಪಿ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದರು.
ನಂತರ ಆರೋಪಿಗಳ ಶೀಘ್ರ ಬಂದನಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಧರಣಿಯಲ್ಲಿ ಬಿಜೆಪಿ ಮುಖಂಡರಾದ ವರಸಿದ್ದಿ ವೇಣುಗೋಪಾಲ್, ತಮ್ಮಯ್ಯ, ಲೋಕೇಶ್, ಕಲ್ಮುರುಡಪ್ಪ, ರಂಗನಾಥ್ ಮತ್ತಿತರರು ಉಪಸ್ಥಿತರಿದ್ದರು.