ಭಟ್ಕಳ: ಶಾಹೀನ್ ಸ್ಪೋಟ್ಸ್ ಸೆಂಟರ್ ನಿಂದ ಈದ್ ಸ್ನೇಹಾಕೂಟ

ಭಟ್ಕಳ, ಜೂ. 23: ನಗರದ ಮಗ್ದೂಮ್ ಕಾಲನಿಯ ಶಾಹೀನ್ ಸ್ಪೋರ್ಟ್ಸ್ ಸೆಂಟರ್ ನೇತೃತ್ವದಲ್ಲಿ ಮ್ಯಾಂಗೋ ಫಾರ್ಮ ನಲ್ಲಿ ಈದ್ ಸ್ನೇಹ ಕೂಟವನ್ನು ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಮಾತನಾಡಿದ ಜಮಾಅತುಲ್ ಮುಸ್ಲಿಮೀನ್ ಮಗ್ದೂಮ್ ಕಾಲೋನಿಯ ಅಧ್ಯಕ್ಷ ಮೌಲಾನ ಶುಜಾವುದ್ದೀನ್ ನದ್ವಿ, ಶಾಹೀನ್ ಸ್ಪೋರ್ಟ್ಸ್ ಸೆಂಟರ್ ಮಗ್ದೂಮ್ ಕಾಲನಿಯ ಅಭಿವೃದ್ಧಿ ಕುರಿತಂತೆ ಕಾಳಜಿಯನ್ನು ಹೊಂದಿದ್ದು ಅದು ಈ ನಿಟ್ಟಿನಲ್ಲಿ ತನ್ನ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದ ಅವರು ಭಟ್ಕಳದಲ್ಲಿ ಮುಸ್ಲಿಮ ಸಮುದಾಯ ಪರಸ್ಪರಲ್ಲಿನ ತಪ್ಪುಕಲ್ಪನೆಗಳನ್ನು ನಿವಾರಿಸಿಕೊಳ್ಳಬೇಕು. ಮತ್ತೊಬ್ಬರನ್ನು ಕ್ಷಮಿಸುವ ಗುಣಗಳನ್ನು ಬೆಳೆಸಿಕೊಂಡು ಸಮಾಜಕ್ಕೆ ಉತ್ತಮ ಮಾದರಿ ಸಮುದಾಯವಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶಾಹೀನ್ ಸ್ಪೋರ್ಟ್ಸ ಸೆಂಟರ್ ನಲ್ಲಿ 1977ರಿಂದ ತಮ್ಮನ್ನು ತೊಡಗಿಸಿಕೊಂಡಿರುವ ಹಿರಿಯ ಸದಸ್ಯರಾದ ಝೈನುಲ್ ಆಬಿದೀನ್ ಕರಿಮಿ ಹಾಗೂ ಮುಹಮ್ಮದ್ ಇಲ್ಯಾಸ್ ಆಫಾಖ್ ಸುನೇರಿ ಅವರನ್ನು ಸ್ಮರಣಿಕೆಯನ್ನು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಅಬ್ದುಲ್ ಕಾದಿರ್ ಜೈಲಾನಿ ಮೊಹತೆಶಮ್ ಹಾಗೂ ಮುಬೀನ್ ಕೆ.ಎಂ. ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಬಗ್ಗೆ ಗಮನವನ್ನು ಕೇಂದ್ರೀಕರಿಸಬೇಕು, ಹಣಕಾಸು ತೊಂದರೆಯಿಂದಾಗಿ ಯಾವುದೇ ವಿದ್ಯಾರ್ಥಿಯು ಶಿಕ್ಷಣವನ್ನು ಮೊಟಕುಗೊಳಿಸುವಂತಾಗಬಾರದು ಇದಕ್ಕಾಗಿ ಸ್ಪೋರ್ಟ್ ಸೆಂಟರ್ ತನ್ನ ಸದಸ್ಯರಿಗೆ ಶಿಕ್ಷಣವನ್ನು ಮುಂದುವರೆಸಲು ಆರ್ಥಿಕ ಸಾಯವನ್ನು ನೀಡಬೇಕು ಎಂದರು.
ಸದಸ್ಯರಿಗಾಗಿ ರಾಫಲ್ ಡ್ರಾ ಮೂಲಕ 50ಕ್ಕೂ ಹೆಚ್ಚು ಬಹುಮಾನಗಳನ್ನು ನೀಡಲಾಯಿತು. ಅಬೂಬಕರ್ ಹಲ್ಲಾರೆಗೆ ಬಂಪರ್ ಬಹುಮಾನ ಫ್ರಿಡ್ಜ್ ಲಭ್ಯವಾಯಿತು. ಶಾಹೀನ್ ಸ್ಪೋರ್ಟ್ಸ್ ಸೆಂಟರ್ ಅಧ್ಯಕ್ಷ ಸಮಿಯುಲ್ಲಾ ಇತ್ತಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮವು ಹಾಫಿರ್ ಆಹ್ಮದ್ ಹುಝೈಮಾ ಹಲ್ಲಾರೆ ಕುರ್‌ಆನ್ ಪಠಣದೊಂದಿಗೆ ಆರಂಭಗೊಂಡಿತು. ಶಾಹಿನ್ ಸ್ಪೋರ್ಟ್ಸ್ ಸೆಂಟರ್ ಪ್ರಧಾನ ಕಾರ್ಯದರ್ಶಿ ಮುಬಶ್ಶಿರ್ ಹಲ್ಲಾರೆ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಯಾಸೀನ್ ತಾಹಿರಾ ಧನ್ಯವಾದ ಅರ್ಪಿಸಿದರು. ಮುಸಾಬ್ ಆಹ್ಮದ್ ಆಬೀದಾ ಹಾಗೂ ಹಿದಾಯತ್ ರುಕ್ನುದ್ದೀನ್ ಕಾರ್ಯಕ್ರಮ ನಿರೂಪಿಸಿದರು.
ಆಮಾಅತುಲ್ ಮುಸ್ಲಿಮೀನ್ ಮಗ್ದೂಮ್ ಕಾಲೋನಿಯ ಸದಸ್ಯ ಅಬೂಬಕರ್ ಹಬೀಬಾ, ಮುಹಮ್ಮದ್ ಉಸ್ಮಾನ್ ಹಲ್ಲಾರೆ, ಅಬ್ದುಲ್ ಕಾದಿರ್ ಕೋಲಂಬೋ, ಪುರಸಭೆ ಅಧ್ಯಕ್ಷ ಮುಹಮ್ಮದ್ ಮಟ್ಟಾ ಸಾದೀಕ್ ಶಬ್ಬಿರ್ ಬಾಕ್‌ಪಠಾನ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತಿದ್ದರು.







