ಕೇಂದ್ರದಿಂದ 9 ಸದಸ್ಯರ ಕಾವೇರಿ ಮಂಡಳಿ ರಚನೆ: ಕರ್ನಾಟಕದ ಪ್ರತಿನಿಧಿಗಳೇ ಇಲ್ಲ!

ಹೊಸದಿಲ್ಲಿ, ಜೂ.23: ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ರಚನೆ ಕುರಿತು ಕೇಂದ್ರ ಸರಕಾರ ಅಧಿಸೂಚನೆ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಕೇಂದ್ರ ಜಲಸಂಪನ್ಮೂಲ ಇಲಾಖೆ ಶನಿವಾರ ಪ್ರಾಧಿಕಾರಕ್ಕೆ ಸದಸ್ಯರ ನೇಮಕಗೊಳಿಸಿ ಆದೇಶ ನೀಡಿದೆ. ಜೊತೆಗೆ ಕಾವೇರಿ ಜಲ ನಿಯಂತ್ರಣ ಸಮಿತಿಗೂ ಸದಸ್ಯರನ್ನು ನೇಮಿಸಿದೆ.
ಆದರೆ, ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಹಾಗೂ ಜಲನಿಯಂತ್ರಣ ಸಮಿತಿಯಲ್ಲಿ ತಲಾ 9 ಮಂದಿ ಸದಸ್ಯರಿದ್ದು, ಕರ್ನಾಟಕದ ಯಾವುದೇ ಪ್ರತಿನಿಧಿಗಳಿಗೆ ಅವಕಾಶ ನೀಡಿರುವುದಿಲ್ಲ. ಕರ್ನಾಟಕ ಸರಕಾರ ತನ್ನ ಪ್ರತಿನಿಧಿಗಳ ಹೆಸರು ಕಳುಹಿಸಿಲ್ಲ ಎನ್ನುವ ಕಾರಣಕ್ಕೆ ರಾಜ್ಯದ ಪ್ರತಿನಿಧಿಗಳ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಹೇಳಲಾಗುತ್ತಿದೆ.
ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ
ಕೇಂದ್ರ ಜಲ ಆಯೋಗದ ಮುಖ್ಯಸ್ಥ ಮಸೂದ್ ಹುಸೈನ್ ಅವರನ್ನು ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಿಸಿ, ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಕೇಂದ್ರ ಜಲ ಆಯೋಗದ ಮುಖ್ಯ ಇಂಜಿನಿಯರ್ ಆಗಿರುವ ನವೀನ್ ಕುಮಾರ್ ಪ್ರಾಧಿಕಾರದ ಖಾಯಂ ಸದಸ್ಯರಾಗಿರುವ ಜೊತೆಗೆ ಕಾವೇರಿ ಜಲ ನಿಯಂತ್ರಣ ಸಮಿತಿಯ ಅಧ್ಯಕ್ಷರೂ ಆಗಿ ನೇಮಕಗೊಂಡಿದ್ದಾರೆ.
ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದಲ್ಲಿ ಅಧ್ಯಕ್ಷರೂ ಸೇರಿ ಒಟ್ಟು 9 ಮಂದಿ ಸದಸ್ಯರು ಇರುವರು. ಕೇರಳದ ಜಲ ಇಲಾಖೆಯ ಕಾರ್ಯದರ್ಶಿ ಟಿಂಕು ಬಿಸ್ವಾಲ್, ಪುದು ಚೇರಿಯ ಲೋಕೋಪಯೋಗಿ ಇಲಾ ಖೆಯ ಕಾರ್ಯದರ್ಶಿ ಅನ್ಬರಸು, ತಮಿಳು ನಾಡಿನ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಕೆ. ಪ್ರಭಾಕರ್ ತಮ್ಮ ತವ್ಮು ರಾಜ್ಯಗಳನ್ನು ಪ್ರತಿನಿಧಿಸಲಿದ್ದಾರೆ.
ಕಾವೇರಿ ಜಲ ನಿಯಂತ್ರಣ ಸಮಿತಿ: ಕಾವೇರಿ ಜಲ ನಿಯಂತ್ರಣ ಸಮಿತಿಯಲ್ಲಿ ಕೂಡ 9 ಜನ ಸದಸ್ಯರು ಇರಲಿದ್ದಾರೆ. ಕೇರಳ, ತಮಿಳುನಾಡು, ಪುದುಚೇರಿಯ ನೀರಾವರಿ ಮುಖ್ಯ ಇಂಜಿನಿಯರ್‌ಗಳು, ಹವಾಮಾನ ಇಲಾಖೆಯ ವಿಜ್ಞಾನಿ ಡಾ. ಎ. ಮಹಾಪಾತ್ರ, ಕೇಂದ್ರೀಯ ಜಲ ಆಯೋಗದ ಕೊಯಮತ್ತೂರು ಸಿ ಆ್ಯಂಡ್ ಎಸ್.ಆರ್.ಒ. ಮುಖ್ಯ ಇಂಜಿನಿಯರ್ ಎಂ.ಎನ್. ಕೃಷ್ಣನುಣ್ಣಿ, ಕೇಂದ್ರ ಸರಕಾರದ ತೋಟಗಾರಿಕೆ ಆಯುಕ್ತರ ಹಾಗೂ ಕೇಂದ್ರೀಯ ಜಲ ಆಯೋಗದ ಮುಖ್ಯ ಎಂಜಿನಿಯರ್ ಎ.ಎಸ್. ಗೋಯಲ್ ಸಮಿತಿಯ ಸದಸ್ಯರಾಗಿದ್ದಾರೆ. ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ ಕೇಂದ್ರ ಕಚೇರಿ ಹೊಸದಿಲ್ಲಿಯಲ್ಲಿರಲಿದ್ದು, ಕಾವೇರಿ ಜಲ ನಿಯಂತ್ರಣ ಸಮಿತಿಯ ಮುಖ್ಯ ಕಾರ್ಯಾಲಯ ಬೆಂಗಳೂರಿನಲ್ಲಿ ಇರಲಿದೆ. ಜುಲೈ ಮೊದಲ ವಾರದಲ್ಲಿ ಹೊಸದಿಲ್ಲಿಯ ಸಿಡಬ್ಲ್ಯೂಸಿ ಕೇಂದ್ರ ಕಚೇರಿಯಲ್ಲಿ ಮೊದಲ ಸಭೆ ನಡೆಸಲು ನಾವು ಯೋಚಿಸುತ್ತಿದ್ದೇವೆ. ಸಿದ್ಧತಾ ಕಾರ್ಯದ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಸಲಿದ್ದೇವೆ ಎಂದು ಜಲ ಸಂಪನ್ಮೂಲ ಸಚಿವಾಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.







