ರಕ್ತದಾನದ ಬಗ್ಗೆ ಯುವಕ ಮಂಡಲದಲ್ಲಿ ಅರಿವು ಅಗತ್ಯ-ಸುರೇಶ್ ರೈ

ಪುತ್ತೂರು, ಜೂ. 24: ರಕ್ತದಾನದ ಕುರಿತು ಅರಿವಿನ ಕೊರತೆಯಿಂದಾಗಿ ಬಹುತೇಕ ಯುವಕ ಮಂಡಲಗಳು ಈ ಮಹತ್ತರವಾದ ಸೇವಾ ಕಾರ್ಯವನ್ನು ಮಾಡುತ್ತಿಲ್ಲ. ಈ ಬಗ್ಗೆ ಯುವಕ ಮಂಡಲಗಳಲ್ಲಿ ಅರಿವು ಮೂಡಿಸಿ ಹೆಚ್ಚು ಹೆಚ್ಚು ಮಂದಿ ರಕ್ತದಾನದಲ್ಲಿ ಭಾಗವಹಿಸುವಂತೆ ಮಾಡಬೇಕು ಎಂದು ದ.ಕ.ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಹೇಳಿದರು.
ಅವರು ಶ್ರೀಜನಾರ್ದನ ಯುವಕ ಮಂಡಲ ಹಾಗೂ ಶ್ರೀ ಸರಸ್ವತಿ ಯುವತಿ ಮಂಡಲ ಪಡ್ನೂರು ಇದರ ಜಂಟಿ ಆಶ್ರಯದಲ್ಲಿ ರೋಟರಿ ಬ್ಲಡ್ ಬ್ಯಾಂಕ್‌ನ ಸಹಯೋಗದೊಂದಿಗೆ ಭಾನುವಾರ ಪುತ್ತೂರಿನ ಬ್ಲಡ್ ಬ್ಯಾಂಕ್‌ನಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ತಾಲೂಕಿನಲ್ಲಿ ನೂರಕ್ಕೂ ಅಧಿಕ ಯುವಕ, ಯುವತಿ ಮಂಡಲಗಳಿವೆ. ರಕ್ತದಾನದಲ್ಲಿ ಎಲ್ಲಾ ಯುವಕ ಯುವತಿ ಮಂಡಲಗಳು ಭಾಗಿಗಳಾಗಬೇಕು. ಕನಿಷ್ಠ 50 ಯುವಕ, ಯುವತಿ ಮಂಡಲಗಳು ರಕ್ತದಾನ ಮಾಡಿದರೂ ಪುತ್ತೂರಿನಲ್ಲಿ ರಕ್ತದ ಕೊರತೆ ನೀಗಿಸಲು ಸಾಧ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬನ್ನೂರು ಗ್ರಾ.ಪಂ ಅಧ್ಯಕ್ಷೆ ದಾನಗಳಲ್ಲಿ ಶ್ರೇಷ್ಟವಾದುದು ರಕ್ತದಾನ. ಪ್ರಸ್ತುತ ದಿನಗಳಲ್ಲಿ ರಕ್ತದ ಆವಶ್ಯಕತೆ ಹೆಚ್ಚುತ್ತಿದ್ದು ಆರೋಗ್ಯವಂತರು ರಕ್ತದಾನ ಮಾಡುವ ಮೂಲಕ ಇನ್ನೊಬ್ಬರ ಜೀವ ಉಳಿಸುವ ಕಾರ್ಯದಲ್ಲಿ ಭಾಗಿಗಳಾಗಬೇಕು ಎಂದು ಹೇಳಿದರು.
ಬ್ಲಡ್ ಬ್ಯಾಂಕ್‌ನ ವೈದ್ಯಾಧಿಕಾರಿ ಡಾ.ರಾಮಚಂದ್ರ ಭಟ್ ರಕ್ತದಾನ ಹಾಗೂ ಮುಂಜಾಗ್ರತೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಯುವಕ ಮಂಡಲದ ಗೌರವ ಸಲಹೆಗಾರ ಬಾಲಕೃಷ್ಣ ಜೋಯಿಷ ಯರ್ಮುಂಜ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಪೂವಪ್ಪ ದೇಂತಡ್ಕ, ಯುವತಿ ಮಂಡಲದ ಗೌರವಾಧ್ಯಕ್ಷೆ ಸಾವಿತ್ರಿ ಕೊಡಂಗೆ, ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸುಬ್ರಹ್ಮಣ್ಯ ಕರುಂಬಾರು, ಮಂಗಳೂರು ನೆಹರು ಯುವ ಕೇಂದ್ರದ ತಾಲೂಕು ಪ್ರತಿನಿಧಿ ಜೆಸ್ಮಿತಾ, ಯುವಕ ಮಂಡಲದ ಅಧ್ಯಕ್ಷ ಸತೀಶ್ ಆಟಿಕ್ಕು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯುವಕ ಮಂಡಲದ ಮಾಜಿ ಅಧ್ಯಕ್ಷ ರಾಜೇಶ್ ಬೇರಿಕೆ ಸ್ವಾಗತಿಸಿದರು. ಮಾಜಿ ಕಾರ್ಯದರ್ಶಿ ರಾಜೇಶ್ ಆಟಿಕ್ಕು ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಜಗದೀಶ್ ವಂದಿಸಿದರು.







