ಕೂಡಿಗೆ ಸೈನಿಕ ಶಾಲೆಯಲ್ಲಿ ವಿದ್ಯಾರ್ಥಿಯ ಅನುಮಾನಾಸ್ಪದ ಸಾವು: ಪೋಷಕರ ಪ್ರತಿಭಟನೆ

ಮಡಿಕೇರಿ, ಜೂ.24: ಕೂಡಿಗೆ ಸೈನಿಕ ಶಾಲೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಒಂಭತ್ತನೇ ತರಗತಿ ವಿದ್ಯಾರ್ಥಿ ಚಿಂಗಪ್ಪ (14) ನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಮೃತ ಬಾಲಕನ ಸಂಬಂಧಿಕರು ಮಡಿಕೇರಿ ಜಿಲ್ಲಾಸ್ಪತ್ರೆಯ ಶವಾಗಾರದ ಎದುರು ಪ್ರತಿಭಟನೆ ನಡೆಸಿದರು.
ಸೈನಿಕ ಶಾಲೆಯ ಪ್ರಾಂಶುಪಾಲರು ತಕ್ಷಣ ಸ್ಥಳಕ್ಕೆ ಆಗಮಿಸಿ ನಡೆದ ಘಟನೆಯನ್ನು ವಿವರಿಸುವಂತೆ ಪಟ್ಟು ಹಿಡಿದರಲ್ಲದೇ, ಐದು ಮಂದಿ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಆಗ್ರಹಿಸಿದರು. ದೂರಿನಲ್ಲಿ ಉಲ್ಲೇಖಿಸಿರುವ ಸೈನಿಕ ಶಾಲೆಯ ಸಿಬ್ಬಂದಿಗಳಾದ ಗೋವಿಂದರಾಜು, ಮಂಜಪ್ಪ, ಮ್ಯಾಥ್ಯು, ಸೀಮಾ ಹಾಗೂ ಸುನೀಲ್ ಅವರುಗಳನ್ನು ಬಂಧಿಸದೇ ಮೃತದೇಹವನ್ನು ವಶಕ್ಕೆ ಪಡೆಯುವುದಿಲ್ಲವೆಂದು ಪಟ್ಟು ಹಿಡಿದರು. ಈ ಸಂದರ್ಭ ಪೊಲೀಸರು ಮತ್ತು ಮೃತ ಬಾಲಕನ ಸಂಬಂಧಿಕರ ನಡುವೆ ಮಾತಿನ ಚಕಮಕಿ ನಡೆಯಿತು.
ಸಮವಸ್ತ್ರ ಧರಿಸಿದ ಸ್ಥಿತಿಯಲ್ಲೇ ಬಾಲಕನ ಮೃತದೇಹ ಪತ್ತೆಯಾಗಿದೆ. ಈ ಘಟನೆ ಮಧ್ಯಾಹ್ನ 2 ಗಂಟೆಯ ಒಳಗೆ ನಡೆದಿದೆ. ಹೀಗಿದ್ದರೂ ಕೂಡ ಶಾಲೆಯ ಆಡಳಿತ ಮಂಡಳಿ ಆರು ಗಂಟೆಗೆ ಮೃತ ಬಾಲಕನ ತಂದೆ ಪೂವಯ್ಯ ಅವರಿಗೆ ಕರೆ ಮಾಡಿ ಚಿಂಗಪ್ಪ ಕಾಣುತ್ತಿಲ್ಲವೆಂದು ತಿಳಿಸಿದ್ದಾರೆ. ಶೌಚಾಲಯದ ಆವರಣದಲ್ಲಿದ್ದ ಸಿಸಿ ಕ್ಯಾಮೆರಾ ಕೂಡಾ ಘಟನೆ ನಡೆದ ಸಂದರ್ಭ ಚಾಲನೆಯಲ್ಲಿ ಇರಲಿಲ್ಲ ಎಂದು ಬಾಲಕನ ಸಂಬಂಧಿಕರು ಆರೋಪಿಸಿದರು.
ಪೂವಯ್ಯ ಅವರು ಪುತ್ರನನ್ನು ಹುಡುಕುವುದಕ್ಕಾಗಿ ಶಾಲೆಯಿಂದ ತೆರಳಿದ ಬಳಿಕ ತುರ್ತುವಾಹನದಲ್ಲಿ ಚಿಂಗಪ್ಪನ ಮೃತದೇಹವನ್ನು ಕೂಡಿಗೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಈ ಸಂದರ್ಭ ತುರ್ತುವಾಹನ ಸಿಬ್ಬಂದಿಗಳು ಬಾಲಕ ಮೃತಪಟ್ಟಿರುವುದನ್ನು ಪೂವಯ್ಯ ಅವರಿಗೆ ತಿಳಿಸಿದ್ದು, ಶಾಲೆಯ ಆಡಳಿತ ಮಂಡಳಿ ಏಕೆ ಮಾಹಿತಿ ನೀಡಲಿಲ್ಲವೆಂದು ಸ್ಥಳಕ್ಕೆ ಆಗಮಿಸಿದ್ದ ಸೈನಿಕ ಶಾಲೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಸಾದ್ ಅವರನ್ನು ಮೃತ ಬಾಲಕನ ಸಂಬಂಧಿಕರು ತೀವ್ರ ತರಾಟೆಗೆ ತೆಗೆದುಕೊಂಡರು.
ಮಾಹಿತಿ ಅರಿತು ಸ್ಥಳಕ್ಕಾಗಮಿಸಿದ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಜೇಂದ್ರ ಪ್ರಸಾದ್, ವಿಧಾನಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ ಅವರು ಕೂಡಿಗೆ ಸೈನಿಕ ಶಾಲೆಯ ಅಧಿಕಾರಿಗಳೊಂದಿಗೆ ಘಟನೆಯ ಮಾಹಿತಿ ಪಡೆದರು. ಬಳಿಕ ಅವರು ಮೃತ ಬಾಲಕನ ಪೋಷಕರಿಗೆ ಸಾಂತ್ವಾನ ಹೇಳಿ ಸೂಕ್ತ ಕಾನೂನು ಕ್ರಮಕೈಗೊಳ್ಳುವ ಭರವಸೆ ನೀಡಿದರಲ್ಲದೇ, ತನಿಖೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
'ಘಟನೆ ಕುರಿತು ಸಂಸದ ಪ್ರತಾಪ್ ಸಿಂಹ ಅವರಿಗೆ ಮಾಹಿತಿ ನೀಡಿದ್ದೇನೆ. ಸಂಸದರು ಕೇಂದ್ರ ಸಚಿವರಿಗೆ ಮಾಹಿತಿ ನೀಡಿ ಸಮರ್ಪಕ ತನಿಖೆ ನಡೆಸಲು ಸೂಚಿಸುವಂತೆ ಕೋರಿದ್ದಾರೆ. ಹೀಗಾಗಿ ಪ್ರತಿಭಟನೆ ಕೈಬಿಡಬೇಕು' ಎಂದು ಸುನೀಲ್ ಸುಬ್ರಮಣಿ ಮನವಿ ಮಾಡಿದರು. ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಕೂಡಾ ಪಾರದರ್ಶಕ ತನಿಖೆ ನಡೆಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಟ್ಟು ಮೃತದೇಹವನ್ನು ಬಾಲಕನ ಹುಟ್ಟೂರಾದ ಮಾದಾಪುರಕ್ಕೆ ಕೊಂಡೊಯ್ಯಲಾಯಿತು.
ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್, ಘಟನೆ ಕುರಿತು ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಿಸಿ ಕ್ಯಾಮರಾ ದೃಶ್ಯಾವಳಿ ಸಂಗ್ರಹಿಸಿ ತನಿಖೆ ಪ್ರಾರಂಭಿಸಲಾಗುತ್ತದೆ. ಮರಣೋತ್ತರ ಪರೀಕ್ಷಾ ವರದಿ ಮತ್ತು ತನಿಖೆ ಪೂರ್ಣಗೊಂಡ ಬಳಿಕವೇ ಸತ್ಯಾಂಶ ತಿಳಿಯಲಿದೆ ಎಂದು ಹೇಳಿದರು.
ಎಂಎಲ್‍ಸಿ ಸುನಿಲ್ ಸುಬ್ರಮಣಿ ಮಾತನಾಡಿ, ಕೊಡಗಿನ ಪಾಲಿಗೆ ಇದೊಂದು ದುರ್ದೈವದ ಸಂಗತಿಯಾಗಿದೆ. ತನಿಖೆಯಲ್ಲಿ ಶಾಲಾ ಆಡಳಿತ ಮಂಡಳಿ ತಪ್ಪೆಸಗಿರುವುದು ಸಾಬೀತಾದರೇ ಸೂಕ್ತ ಕಾನೂನು ಕ್ರಮಕ್ಕೆ ಶಿಫಾರಸ್ಸು ಮಾಡುವುದಾಗಿ ತಿಳಿಸಿದರು.
ಸಾವಿನ ಕುರಿತು ಶಾಲೆಯ ಸ್ಪಷ್ಟೀಕರಣ: ವಿದ್ಯಾರ್ಥಿ ಎನ್.ಪಿ.ಚಿಂಗಪ್ಪ ಸಾವಿನ ಪ್ರಕರಣವನ್ನು ಕೊಲೆ ಎಂದು ಪೋಷಕರು ಆರೋಪಿಸಿರುವ ಬೆನ್ನಲ್ಲೇ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಶಾಲೆಯ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
'ದಿನಾಂಕ 23.06.2018 ರಂದು ಸಂಜೆ 08 ಗಂಟೆ ವೇಳೆ ಸೈನಿಕ ಶಾಲೆಯ 9ನೇ ತರಗತಿ ವಿದ್ಯಾರ್ಥಿಯಾದ ಕೆಡೆಟ್ ಚಿಂಗಪ್ಪ ಎನ್.ಪಿ, ಕ್ರಮ ಸಂಖ್ಯೆ 739 ಇವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಾಗ ಸಾವನಪ್ಪಿದ್ದಾನೆಂದು ದೃಢಪಟ್ಟಿತು. ಇದಕ್ಕೂ ಮೊದಲು ಪ್ರಸ್ತುತ ವಿದ್ಯಾರ್ಥಿ ಮಾಡಿದ ತಪ್ಪಿನ ಕುರಿತು ಸಂಬಂಧಿಸಿದ ಶಿಕ್ಷಕರಿಂದ ಕೌನ್ಸಿಲಿಂಗ್ ಮಾಡಲಾಗಿತ್ತು. ತದ ನಂತರ ಸಂಜೆ ಸದರಿ ವಿದ್ಯಾರ್ಥಿಯು ಮೂರ್ಛಾವಸ್ಥೆಯಲ್ಲಿ ಶಾಲೆಯ ವಿದ್ಯಾರ್ಥಿಗಳ ಶೌಚಾಲಯದಲ್ಲಿ ಕಂಡು ಬಂದಿದ್ದು, ತಕ್ಷಣವೇ ಕೂಡಿಗೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಯಿತು. ಪೊಲೀಸ್ ತನಿಖೆಯು ಪ್ರಗತಿಯಲ್ಲಿದ್ದು, ಶಾಲೆಯು ತನಿಖೆಗೆ ಎಲ್ಲಾ ರೀತಿಯಲ್ಲಿ ಸಹಕರಿಸುತ್ತಿದೆ ಶಾಲೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.







