ಜಪ್ಪು 'ಸದ್ಭಾವನ ವೇದಿಕೆ'ಯಿಂದ 'ಈದ್ ಸೌಹಾರ್ದ ಕೂಟ'

ಮಂಗಳೂರು, ಜೂ.24: ಸದ್ಭಾವನ ವೇದಿಕೆ ಜಪ್ಪು ವರ್ತುಲದ ವತಿಯಿಂದ ಆಯೋಜಿಸಲಾಗಿದ್ದ ಈದ್ ಸೌಹಾರ್ದ ಕೂಟ ನಗರದ ಮೊರ್ಗನ್ಸ್ ಗೇಟ್ ಚರ್ಚ್ ಹಾಲ್‌ನಲ್ಲಿ ರವಿವಾರ ಜರುಗಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಿವಿಲ್ ಇಂಜಿನಿಯರ್ಸ್ ಇಂಡಿಯಾ ಅಸೋಸಿಯೇಶನ್‌ನ ದಕ್ಷಿಣ ವಲಯದ ಉಪಾಧ್ಯಕ್ಷ ವಿಜಯ ವಿಷ್ಣು ಮಯ್ಯ ಮಾತನಾಡಿ, ಪ್ರತೀ ಜೀವಿಯಲ್ಲೂ ದೇವರನ್ನು ಕಾಣುವ ಮೂಲಕ ಸಮಾಜದಲ್ಲಿ ಬದಲಾವಣೆ ತರುವಂತಾಗಬೇಕು ಎಂದರು.
ಮಂಜೇಶ್ವರ ಪಾವೂರು ಮಾನಸಿಕ ಅಸ್ವಸ್ಥರ ಪುನಶ್ಚೇತನ ಕೇಂದ್ರ 'ಸ್ನೇಹಾಲಯ'ದ ಸ್ಥಾಪಕ ಜೋಸೆಫ್ ಕ್ರಾಸ್ತಾ ಮಾತನಾಡಿ, ಸತ್ಕಾರ್ಯವಿಲ್ಲದೆ ಇದ್ದರೆ ಆ ಧರ್ಮ ಸತ್ತಂತೆ. ಎಲ್ಲ ಧರ್ಮಗಳಿಗಿಂತಲೂ ಮಾನವೀಯತೆ ಶ್ರೇಷ್ಠ ಧರ್ಮ ಎಂದು ಅಭಿಪ್ರಾಯಿಸಿದರು.
ಮಂಗಳೂರು ಜಮಾಅತೆ ಇಸ್ಲಾಮೀ ಹಿಂದ್‌ನ ಸಂಚಾಲಕ ಅಬ್ದುಸ್ಸಲಾಂ ಯು. ಮಾತನಾಡಿ, ಕೋಮುವಾದಕ್ಕೆ ಪ್ರತಿ ಕೋಮುವಾದ ಮದ್ದಲ್ಲ. ಸೌಹಾರ್ದದೊಂದಿಗೆ ಕೋಮುವಾದದ ವಿರುದ್ಧ ಹೋರಾಡಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸದ್ಭಾವನ ವೇದಿಕೆ ಜಪ್ಪು ವರ್ತುಲದ ಅಧ್ಯಕ್ಷ ಎಂ.ವಿ.ಸುರೇಶ್ ಮಾತನಾಡಿ, ಕೂಡಿ ಬಾಳಿದರೆ ಬದುಕು ಸ್ವರ್ಗ ಕೆಡುಕು ಬಯಸಿದರೆ ಬದುಕು ನರಕ. ನಾವು ಒಬ್ಬರ ಒಳಿತಿಗೆ ಬಯಸಿದರೆ, ಇನ್ನೊಬ್ಬರು ನಮ್ಮ ಒಳಿತಿಗೆ ಶ್ರಮಿಸುತ್ತಾರೆ ಎಂದರು.
ಪದಾಧಿಕಾರಿಗಳಾದ ಸಾಲೆಹ್ ಮುಹಮ್ಮದ್, ಜೇಸನ್ ಪೀಟರ್ ಡಿಸೋಜ, ಎಂ.ಐ.ಖಲೀಲ್, ರಂಜನ್ ಕೆ.ಎಸ್., ದೀಪಕ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.
ಮುಹಮ್ಮದಲಿ ಕಾರ್ಯಕ್ರಮ ನಿರೂಪಿಸಿದರು.







