ಮಡಿಕೇರಿ: ಎಟಿಎಂ ಕಾರ್ಡ್ ಬದಲಿಸಿ ವಂಚಿಸಿದ್ದ ಆರೋಪಿ ಬಂಧನ
ಮಡಿಕೇರಿ, ಜೂ.24: ಎಟಿಎಂ ನಿಂದ ಹಣ ತೆಗೆಯಲು ಸಹಾಯ ಮಾಡಿದಾತ ಎಟಿಎಂ ಕಾರ್ಡ್ ಬದಲಿಸಿ ಸುಮಾರು 1.90 ಲಕ್ಷ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಮಡಿಕೇರಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೈಸೂರಿನ ಸಿದ್ಧಾರ್ಥ ನಗರದ ನಿವಾಸಿ ಮೆಕಾನಿಕ್ ರಾಜು ಪ್ರಹ್ಲಾದ್ ಕುಲಕರ್ಣಿ ಬಂಧಿತ ಆರೋಪಿ. ಮಡಿಕೇರಿ ತಾಲೂಕು ಬಿಳಿಗೇರಿ ಗ್ರಾಮದ ನಿವಾಸಿ ಕೆ.ಯು.ಲೋಕೇಶ್ ಎಂಬುವವರು 31/05/2018 ರಂದು ಮಡಿಕೇರಿ ನಗರದ ಬಸ್ಸು ನಿಲ್ದಾಣ ಬಳಿ ಇರುವ ವಿಜಯಾ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ಕೆನರಾ ಬ್ಯಾಂಕ್ ಎಟಿಎಂ ಕಾರ್ಡ್ ಬಳಸಿ ರೂ.10 ಸಾವಿರವನ್ನು ಡ್ರಾ ಮಾಡಲು ವ್ಯಕ್ತಿಯೊಬ್ಬರ ಸಹಾಯ ಪಡೆದಿದ್ದರು. ಹಣ ಡ್ರಾ ಮಾಡಿಕೊಟ್ಟ ವ್ಯಕ್ತಿ ಕೆ.ಯು.ಲೋಕೇಶ್ ಅವರಿಗೆ ಸೇರಿದ ಎಟಿಎಂ ಕಾರ್ಡ್‍ನ್ನು ಮರಳಿ ನೀಡದೆ ಬೇರೊಂದು ಕಾರ್ಡ್‍ನ್ನು ನೀಡಿದ್ದಾರೆ. ಈ ಬಗ್ಗೆ ಲೋಕೇಶ್ ಅವರ ಅರಿವಿಗೆ ಬಂದಿರಲಿಲ್ಲ.
ದಿನಾಂಕ 04/06/2018 ರಂದು ಲೋಕೇಶ್ ಅವರು ಬ್ಯಾಂಕ್‍ನಲ್ಲಿ ಪರಿಶೀಲಿಸಿದಾಗ ತನ್ನ ಬ್ಯಾಂಕ್ ಖಾತೆಯಿಂದ 1.90 ಲಕ್ಷ ರೂ. ಹಣ ಡ್ರಾ ಮಾಡಿ ವಂಚಿಸಿರುವುದು ಬೆಳಕಿಗೆ ಬಂದಿದೆ, ಅಲ್ಲದೆ ಎಟಿಎಂ ಬದಲಾದ ಬಗ್ಗೆ ಖಾತ್ರಿಯಾಗಿದೆ. ಈ ಸಂಬಂಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಅವರ ನಿರ್ದೇಶನದಂತೆ ಡಿವೈಎಸ್‍ಪಿ ಸುಂದರ್ ರಾಜ್ ಅವರ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡ ನಗರ ಠಾಣಾ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ, ಠಾಣಾಧಿಕಾರಿ ಎಂ.ಷಣ್ಮುಗಂ ಹಾಗೂ ಸಿಬ್ಬಂದಿಗಳು ಬ್ಯಾಂಕ್‍ನ ಎಟಿಎಂ ಕೇಂದ್ರದಲ್ಲಿದ್ದ ಸಿಸಿ ಟಿವಿ ದೃಶ್ಯಾವಳಿಯನ್ನು ಆಧರಿಸಿ ಆರೋಪಿ ರಾಜು ಪ್ರಹ್ಲಾದ್ ಕುಲಕರ್ಣಿ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತನ ಬಳಿಯಿಂದ 1.20 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಉಳಿದ ಹಣವನ್ನು ಆರೋಪಿ ಖರ್ಚು ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ರೀತಿಯ ಐದು ಪ್ರಕರಣಗಳಿಗೆ ಸಂಬಂಧಿಸಿದಂತೆ ಬೆಂಗಳೂರು ನಗರದ ಕಾಟನ್ ಪೇಟೆ ಪೊಲೀಸರಿಗೆ ರಾಜು ಪ್ರಹ್ಲಾದ್ ಕುಲಕರ್ಣಿ ಬೇಕಾಗಿದ್ದಾನೆ ಎಂದು ತನಿಖೆಯಿಂದ ತಿಳಿದು ಬಂದಿದೆ.
ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಎಸ್‍ಪಿ ರಾಜೇಂದ್ರಪ್ರಸಾದ್ ಬಹುಮಾನ ಘೋಷಿಸಿದ್ದಾರೆ.
ಸಾರ್ವಜನಿಕರು ಬ್ಯಾಂಕ್ ಎಟಿಎಂ ಕಾರ್ಡ್‍ನ ರಹಸ್ಯ ಸಂಖ್ಯೆಯನ್ನು ಯಾರಿಗೂ ನೀಡದಂತೆ ಎಸ್ ಪಿ ಮನವಿ ಮಾಡಿದ್ದಾರೆ. ದೂರವಾಣಿ ಮೂಲಕ ಬ್ಯಾಂಕ್ ಮಾಹಿತಿಯನ್ನು ಅಪರಿಚಿತರು ಬಯಸಿದರೆ ತಕ್ಷಣ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 08272-228330 ಗೆ ಕರೆ ಮಾಡುವಂತೆ ತಿಳಿಸಿದ್ದಾರೆ.