ಚಿಕ್ಕಮಗಳೂರು: ರೇಸ್ ಪ್ರಿಯರ ಮನಸೂರೆಗೊಂಡ ಡರ್ಟ್ ಟ್ರ್ಯಾಕ್ ಬೈಕ್ ರ‍್ಯಾಲಿ
ಚಿಕ್ಕಮಗಳೂರು, ಜೂ.24: ನಗರದ ಟೀಮ್-13 ಸಂಸ್ಥೆ ವತಿಯಿಂದ ಇಲ್ಲಿನ ಚಿಕ್ಕಮಗಳೂರು ಕಾಫಿ ಕ್ಯೂರಿಂಗ್ ಆವರಣದ ಮೈದಾನದಲ್ಲಿ ರವಿವಾರ ನಡೆದ ರಾಷ್ಟ್ರೀಯ ಮಟ್ಟದ ಡರ್ಟ್ ಟ್ರ್ಯಾಕ್ ಬೈಕ್ ಸಾರ್ವಜನಿಕರು ಮತ್ತು ರೇಸ್ ಪ್ರಿಯರ ಮನಸೂರೆಗೊಂಡಿತು.
ದೇಶದ ವಿವಿಧೆಡೆಗಳಿಂದ ಬಂದಿದ್ದ ಹೆಸರಾಂತ್ ಬೈಕ್ ರೇಸ್ ಪಟುಗಳು ಮಣ್ಣಿನ ಟ್ರ್ಯಾಕ್‍ನಲ್ಲಿ ತೋರಿದ ಬೈಕ್ ರೇಸ್‍ನ ಕಸರತ್ತು ಸಾರ್ವಜನಿಕರ ಮೈನವಿರೇಳುವಂತೆ ಮಾಡಿತು. ಟೀಮ್ 13 ಚಿಕ್ಕಮಗಳೂರು ರೇಸಿಂಗ್, ಆರೆಂಜ್ ಅಡ್ವೆಂಚರ್ ಮೋಟಾರ್ ಸ್ಪೋಟ್ರ್ಸ್ ಕ್ಲಬ್ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಡರ್ಟ್ ರೇಸ್ ರ್ಯಾಲಿಯಲ್ಲಿ ಬೈಕ್ ಸವಾರರು ಎತ್ತರ ತಗ್ಗಿನ ದಿಬ್ಬಗಳಲ್ಲಿ ಮುಗಿಲೆತ್ತರಕ್ಕೆ ಬೈಕ್ ಹಾರಿಸುವ ವೇಳೆ ನೆರೆದಿದ್ದ ರೇಸ್ ಪ್ರಿಯರು ಚಪ್ಪಾಳೆ, ಶಿಳ್ಳೆ ಹೊಡೆದು ರ್ಯಾಲಿ ಪಟುಗಳನ್ನು ಪ್ರೋತ್ಸಾಹಿಸುತ್ತಿದ್ದುದು ಕಂಡು ಬಂತು.
ದೇಶದ ವಿವಿಧೆಡೆಯಿಂದ ಬಂದಿದ್ದ ಬೈಕ್ ರ್ಯಾಲಿ ಪಟುಗಳು ಆಕರ್ಷಕ ಬೈಕ್ ಓಡಿಸುವ ಪ್ರಾವೀಣ್ಯತೆಯನ್ನು ಪ್ರದರ್ಶಿಸಿದರು. ಸ್ಪರ್ಧೆಯಲ್ಲಿ ಕೇರಳ, ಕೊಯಮತ್ತೂರು, ಕೊಲ್ಕತ್ತ ಹಾಗೂ ರಾಜ್ಯದ ಬೆಂಗಳೂರು, ಮಂಗಳೂರು, ತುಮಕೂರು ಹಾಸನ ಸೇರಿದಂತೆ ವಿವಿಧ ಭಾಗಗಳಿಂದ ಸ್ಪರ್ಧಾಳುಗಳು ಭಾಗವಹಿಸಿದ್ದರು.