ಸರ್ವಪಕ್ಷಗಳ ಮುಖಂಡರ ಸಭೆ ಕರೆಯಲು ನಿರ್ಧಾರ: ಸಚಿವ ಡಿ.ಕೆ.ಶಿವಕುಮಾರ್
ಕೇಂದ್ರದಿಂದ ಕಾವೇರಿ ನಿರ್ವಹಣಾ ಸಮಿತಿ ರಚನೆ
ಬೆಂಗಳೂರು, ಜೂ.25: ಕೇಂದ್ರ ಸರಕಾರವು ರಾಜ್ಯದ ಮನವಿಗೆ ಮನ್ನಣೆ ನೀಡದೆ ಕಾವೇರಿ ನಿರ್ವಹಣಾ ಸಮಿತಿ ರಚನೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಸರ್ವಪಕ್ಷಗಳ ಮುಖಂಡರ ಸಭೆ ಕರೆಯಲು ನಿರ್ಧರಿಸಿದೆ.
ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ನಡೆಸಿದ ಉನ್ನತ ಅಧಿಕಾರಿಗಳ ಸಭೆಯಲ್ಲಿ ಕಾವೇರಿ ನಿರ್ವಹಣಾ ಸಮಿತಿ ರಚನೆಯಿಂದಾಗಿ ಆಗಬಹುದಾದ ಸಾಧಕ-ಬಾಧಕಗಳ ಕುರಿತು ಸುದೀರ್ಘ ಸಮಾಲೋಚನೆ ನಡೆಸಿದರು.
ಕಾವೇರಿ ನಿರ್ವಹಣಾ ಸಮಿತಿ ರಚನೆಗೆ ಸಂಬಂಧಿಸಿದಂತೆ ಜೂ.18ರಂದೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪ್ರಧಾನಿ ನರೇಂದ್ರಮೋದಿ ಹಾಗೂ ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿಯನ್ನು ಭೇಟಿ ಮಾಡಿ ರಾಜ್ಯಕ್ಕಿರುವ ಆತಂಕಗಳನ್ನು ನಿವಾರಿಸುವಂತೆ ಮನವಿ ಸಲ್ಲಿಸಿದ್ದರು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ವಿಚಾರಕ್ಕೆ ಸಂಬಂಧಿಸಿದಂತೆ ಸಭೆಯನ್ನು ಕರೆಯುವುದಾಗಿ ಭರವಸೆ ನೀಡಿದ್ದ ಪ್ರಧಾನಮಂತ್ರಿ, ರಾತ್ರೋ ರಾತ್ರಿ ಕಾವೇರಿ ನಿರ್ವಹಣಾ ಸಮಿತಿಯನ್ನು ರಚನೆ ಮಾಡಿದ್ದಾರೆ ಎಂದರು.
ನಮ್ಮ ಅಹವಾಲುಗಳನ್ನು ಕೇಂದ್ರ ಸರಕಾರ ಕೇಳಿಲ್ಲ. ಈ ಸಮಿತಿ ನಡೆಸುವ ಸಭೆಗಳಲ್ಲಿ ಆರು ಜನ ಇದ್ದರೂ ಕೋರಂ ಎಂದು ಪರಿಗಣಿಸಿ ನಿರ್ಧಾರಗಳನ್ನು ಕೈಗೊಳ್ಳಬಹುದು. ಈ ಅಂಶಕ್ಕೆ ರಾಜ್ಯ ಸರಕಾರ ತನ್ನ ವಿರೋಧವನ್ನು ವ್ಯಕ್ತಪಡಿಸಿದೆ. ಈ ಸಂಬಂಧ ಅಡ್ವೊಕೇಟ್ ಜನರಲ್ ಹಾಗೂ ಕಾನೂನು ತಜ್ಞರ ಸಲಹೆಯನ್ನು ಪಡೆಯಲಾಗಿದೆ. ಜೊತೆಗೆ ಸುಪ್ರೀಂಕೋರ್ಟ್‌ಗೂ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಮನವರಿಕೆ ಮಾಡಿಕೊಡಲು ಇಂದಿನ ಸಭೆಯಲ್ಲಿ ನಿರ್ಧರಿಸಿದ್ದೇವೆ ಎಂದು ಶಿವಕುಮಾರ್ ತಿಳಿಸಿದರು.
ಜುಲೈ 2ರಂದು ಕಾವೇರಿ ನಿರ್ವಹಣಾ ಸಮಿತಿ ಸಭೆ ನಡೆಯಲಿದೆ ಎಂಬ ಮಾಹಿತಿ ಸಿಕ್ಕಿದೆ. ರಾಜ್ಯದ ಪ್ರತಿನಿಧಿಗಳ ಗೈರು ಹಾಜರಿಯಲ್ಲಿ ನಮಗೆ ವಿರೋಧವಾಗುವಂತಹ ಮತ್ತಷ್ಟು ನಿರ್ಧಾರಗಳನ್ನು ಕೈಗೊಳ್ಳುವ ಆತಂಕದ ಕಾರಣದಿಂದಾಗಿ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ರಾಕೇಶ್‌ಸಿಂಗ್ ಹಾಗೂ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಚ್.ಎಲ್.ಪ್ರಸನ್ನ ಅವರನ್ನು ರಾಜ್ಯದ ಪ್ರತಿನಿಧಿಗಳನ್ನಾಗಿ ಸಭೆಗೆ ಕಳುಹಿಸಲು ನಿರ್ಧರಿಸಲಾಗಿದೆ ಎಂದು ಶಿವಕುಮಾರ್ ಹೇಳಿದರು. ಅಲ್ಲದೆ, ಮುಂದಿನ ಲೋಕಸಭಾ ಅಧಿವೇಶನಕ್ಕೆ ಮುಂಚಿತವಾಗಿ ಸರ್ವಪಕ್ಷಗಳ ಮುಖಂಡರು, ಸಂಸದರು, ರಾಜ್ಯಸಭಾ ಸದಸ್ಯರು, ಕಾವೇರಿ ಕಣಿವೆ ಭಾಗದ ಶಾಸಕರು, ವಿಧಾನಪರಿಷತ್ ಸದಸ್ಯರ ಸಭೆ ಕರೆದು ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಲಹೆ ಪಡೆಯಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
ಕಾವೇರಿ ನಿರ್ವಹಣಾ ಮಂಡಳಿಗೆ ರಾಜ್ಯದ ಪ್ರತಿನಿಧಿಗಳನ್ನಾಗಿ ಇಬ್ಬರು ಅಧಿಕಾರಿಗಳನ್ನು ನೇಮಕ ಮಾಡಿ ಜೂ.23ರಂದು ಕೇಂದ್ರ ಸರಕಾರಕ್ಕೆ ಪತ್ರ ಕಳುಹಿಸಲಾಗಿದೆ. ನಾವು ಕೇಂದ್ರ ಸರಕಾರ ಅಥವಾ ನ್ಯಾಯಾಲಯದ ಜೊತೆ ಸಂಘರ್ಷಕ್ಕೆ ಇಳಿದಿಲ್ಲ. ನಮಗೆ ನ್ಯಾಯಬೇಕು ಎಂದು ಪ್ರಧಾನಿ ಹಾಗೂ ನ್ಯಾಯಾಲಯಕ್ಕೆ ವಿನಯಪೂರ್ವಕವಾಗಿ ಮನವಿ ಮಾಡುತ್ತೇವೆ ಎಂದು ಶಿವಕುಮಾರ್ ತಿಳಿಸಿದರು.
ವಿರೋಧ ಪಕ್ಷದವರು ಆರೋಪ ಮಾಡಿದಂತೆ ರಾಜ್ಯ ಸರಕಾರ ಈ ವಿಚಾರದಲ್ಲಿ ಎಲ್ಲೂ ವಿಳಂಬ ಧೋರಣೆ ಅನುಸರಿಸಿಲ್ಲ. ನಮ್ಮನ್ನು ದೂಷಿಸುವುದು ಬಿಜೆಪಿಯವರ ಕೆಲಸ. ಆದರೂ, ಕಾವೇರಿ ನದಿ ನೀರು ಹಂಚಿಕೆಯು ರಾಜ್ಯದ ವಿಷಯ. ರಾಜ್ಯದ ಹಿತಾಸಕ್ತಿಗಾಗಿ ಒಗ್ಗಟ್ಟು ಪ್ರದರ್ಶಿಸುವಂತೆ ಪ್ರತಿಪಕ್ಷದ ಪ್ರಮುಖರಿಗೂ ಮನವಿ ಮಾಡುತ್ತೇವೆ ಎಂದು ಅವರು ಹೇಳಿದರು.