ಪುಸ್ತಕ ನೋಡಿ ಪರೀಕ್ಷೆ ಬರೆಯುವ ಪದ್ಧತಿ ಜಾರಿಗೆ ಚಿಂತನೆ: ಸಚಿವ ಎನ್.ಮಹೇಶ್
ಚಾಮರಾಜನಗರ,ಜೂ.25: ಪುಸ್ತಕ ಮುಚ್ಚಿ ಪರೀಕ್ಷೆ ಬರೆಯಿರಿ ಎಂಬುದು ಅವೈಜ್ಞಾನಿಕ ಪದ್ಧತಿಯಾಗಿದ್ದು, ಪಠ್ಯಪುಸ್ತಕದಲ್ಲಿ ಹುಡುಕಿ ಉತ್ತರ ಬರೆಯುವ ಪರೀಕ್ಷಾ ಪದ್ಧತಿ ಜಾರಿಗೆ ತರಲು ವೈಯಕ್ತಿಕವಾಗಿ ಚಿಂತನೆ ನಡೆಸಿದ್ದೇನೆ. ಶಿಕ್ಷಣ ತಜ್ಞರು, ಅಧಿಕಾರಿಗಳ ಜತೆ ಈ ಬಗ್ಗೆ ಸಮಾಲೋಚನೆ ನಡೆಸುತ್ತೇನೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ತಿಳಿಸಿದ್ದಾರೆ.
ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಎಸೆಸೆಲ್ಸಿ, ಪಿಯುಸಿದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈಗಿನ ಶಿಕ್ಷಣ ವ್ಯವಸ್ಥೆ ಶಿಕ್ಷಕ ಕೇಂದ್ರೀಕೃತವಾಗಿದೆಯೇ ಹೊರತು ವಿದ್ಯಾರ್ಥಿ ಕೇಂದ್ರೀಕೃತವಾಗಿಲ್ಲ. ಶಿಕ್ಷಕರಾದವರು ಪಾಠ ಮಾಡಿದ ತಕ್ಷಣ ನೋಟ್ಸ್ ಬರೆಸಲು ಹೋಗಬೇಡಿ. ಆ ಪಾಠದ ಬಗ್ಗೆ ಪ್ರಶ್ನೆಗಳನ್ನು ತಯಾರಿಸಿ ಮಕ್ಕಳಿಗೆ ಉತ್ತರಿಸಲು ಹೇಳಿ. ರಾಜ್ಯದಲ್ಲಿ ಪುಸ್ತಕ ತೆರೆದು ಉತ್ತರ ಬರೆಯುವ ಪರೀಕ್ಷಾ ಪದ್ಧತಿ ತರಬೇಕು ಎಂದುಕೊಂಡಿದ್ದೇನೆ. ಪರೀಕ್ಷಾ ಹಾಲ್‍ನಲ್ಲಿ ಸಿಸಿ ಕ್ಯಾಮರಾ ಅಳವಡಿಸುವುದು, ವಿದ್ಯಾರ್ಥಿಗಳು ಅತ್ತಿತ್ತ ನೋಡಬಾರದು ಎನ್ನುವುದು ಸರಿಯಲ್ಲ. ವಿದ್ಯಾರ್ಥಿಗಳೇನು ಅಪರಾಧಿಗಳೇ? ನಮ್ಮಲ್ಲಿರುವ ಪರೀಕ್ಷಾ ಪದ್ಧತಿ ಅವೈಜ್ಞಾನಿಕ. ಇದರಿಂದ ಶೇ.2ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಅನುಕೂಲ ಎಂದು ಹೇಳಿದರು.
ಹಿರಿಯರಾದ ನಾವೆಲ್ಲ ಇಲಾಖಾ ಪರೀಕ್ಷೆಗಳಲ್ಲಿ ಪುಸ್ತಕ ನೋಡಿ ಉತ್ತರ ಬರೆಯಲು ಅವಕಾಶವಿದೆ. ಮಕ್ಕಳು ಪುಸ್ತಕ ನೋಡಿ ಬರೆಯುವಂತಿಲ್ಲ. ಇದೆಂಥಾ ವ್ಯವಸ್ಥೆ? ಪುಸ್ತಕ ನೋಡಿ ಬರೆಯುವ ಮಗು ತಾನಾಗೇ ಕಲಿಯುತ್ತದೆ. ನಂತರ ಪುಸ್ತಕ ನೋಡದೆಯೇ ಬರೆಯುವುದನ್ನು ಕಲಿಯುತ್ತದೆ. ಸಂವಹನ ಸಾಮರ್ಥ್ಯ ತಾನಾಗೇ ಬರುತ್ತದೆ. ಹೀಗಾಗಿ, ಪಠ್ಯಪುಸ್ತಕ ನೋಡಿ ಬರೆಯುವ ಸ್ವಾತಂತ್ಯ ನೀಡಬೇಕು. ಈ ಎಲ್ಲ ಮಾತುಗಳನ್ನು ನಾನು ಶಿಕ್ಷಣ ಸಚಿವನಾಗಿ, ಪ್ರಜ್ಞಾಪೂರ್ವಕವಾಗಿಯೇ ಹೇಳುತ್ತಿದ್ದೇನೆ. ಇದೆಲ್ಲವನ್ನೂ ತಕ್ಷಣ ಜಾರಿಗೆ ತರಲು ಸಾಧ್ಯವಿಲ್ಲ ಎಂಬುದು ನನಗೂ ಗೊತ್ತಿದೆ ಎಂದು ಹೇಳಿದರು.