ಬೆಂಗಳೂರು: ಉದ್ಯಮಿ ಮನೆಯಲ್ಲಿ ಕಳವು
ಬೆಂಗಳೂರು, ಜೂ.25: ಉದ್ಯಮಿಯೊಬ್ಬರ ಮನೆಯ ಕಾವಲಿಗಿದ್ದ ನೇಪಾಳ ಮೂಲದ ಭದ್ರತಾ ಸಿಬ್ಬಂದಿ, ಮಾಲಕರ ಮನೆಯ ಮುಂಬಾಗಿಲು ಮುರಿದು 15 ಲಕ್ಷ ರೂ. ನಗದು, 250 ಗ್ರಾಂ ಚಿನ್ನಾಭರಣ ಸೇರಿ 30 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿರುವ ಘಟನೆ ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಯಲಹಂಕ ಉಪನಗರದ ಬಿ ಹಂತದ ಎಲೆಕ್ಟ್ರಿಕಲ್ ಉತ್ಪನ್ನಗಳ ಉದ್ಯಮ ನಡೆಸುತ್ತಿದ್ದ ರಾಜೇಂದ್ರ ಎಂಬವರ ಮನೆಯ ಮುಂಬಾಗಿಲು ಮುರಿದು ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ರಾಜೇಂದ್ರ ಅವರು ಕೆಲದಿನಗಳ ಹಿಂದಷ್ಟೇ ನೇಪಾಳ ಮೂಲದ ಸುಮಾರು 25 ವರ್ಷ ವಯಸ್ಸಿನ ಭದ್ರತಾ ಸಿಬ್ಬಂದಿ ಮನೆಯ ಕಾವಲಿಗೆ ನೇಮಿಸಿಕೊಂಡಿದ್ದು ಆತನ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿರಲಿಲ್ಲ. ಹಗಲಿರುಳೆನ್ನದೇ ಕೆಲಸ ಮಾಡುತ್ತಿದ್ದ ಆತನಿಗೆ ಮನೆಯ ಆವರಣದ ಶೆಡ್‌ನಲ್ಲಿಯೇ ಉಳಿದುಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು ಎನ್ನಲಾಗಿದೆ.
ರವಿವಾರ ರಾಜೇಂದ್ರ ಅವರು ಕುಟುಂಬ ಸಮೇತ ಹೊರ ಹೋಗಿದ್ದ ವೇಳೆಯಲ್ಲಿ ಕೃತ್ಯವೆಸಗಿ ಆತ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿರುವ ಯಲಹಂಕ ಉಪನಗರ ಪೊಲೀಸರು ಆರೋಪಿ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ.







