ಶಿವಮೊಗ್ಗ: ನಶೆಯಲ್ಲಿ ವ್ಹೀಲಿಂಗ್ ನಡೆಸಿ ಹಲ್ಲೆ; ಆರೋಪಿ ಬಂಧನ

ಶಿವಮೊಗ್ಗ, ಜೂ. 25: ಗಾಂಜಾ ಸೇವಿಸಿದ ನಶೆಯಲ್ಲಿ ಬೈಕ್ ವ್ಹೀಲಿಂಗ್ ನಡೆಸಿದ್ದಲ್ಲದೆ, ಬಸ್ ಚಾಲಕನೋರ್ವನ ಮೇಲೆ ಹಲ್ಲೆ ನಡೆಸಿದ ಆರೋಪಿಯೋರ್ವ ಪೊಲೀಸರ ಅತಿಥಿಯಾಗಿರುವ ಘಟನೆ ಶಿವಮೊಗ್ಗ ನಗರದ ಹೊರವಲಯದ ಹರಿಗೆ ಬಳಿ ನಡೆದಿದೆ.
ನಿದಿಗೆ ನಿವಾಸಿ ವಿಷ್ಣು ಬಂಧಿತ ಆರೋಪಿಯಾಗಿದ್ದಾನೆ. ಈತ ಇತರೆ ಸ್ನೇಹಿತರ ಜೊತೆ ಭದ್ರಾವತಿ ಬೈಪಾಸ್ ರಸ್ತೆಯಿಂದ ಹರಿಗೆಯವರಿಗೆ ಬೈಕ್‍ನಲ್ಲಿ ವ್ಹೀಲಿಂಗ್ ಮಾಡಿಕೊಂಡು ಬರುತ್ತಿದ್ದನು. ಆರೋಪಿಗಳು ವಾಹನಗಳ ಓಡಾಟಕ್ಕೂ ಅಡ್ಡಿಪಡಿಸುತ್ತಿದ್ದು, ಇದನ್ನು ಬಸ್ ಚಾಲಕರೊಬ್ಬರು ಪ್ರಶ್ನಿಸಿದ್ದಾರೆ.
ಇದರಿಂದ ಆಕ್ರೋಶಗೊಂಡ ಆರೋಪಿಗಳು ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ತದನಂತರ ಕೆಲ ಬಸ್ ಚಾಲಕರು, ನಿರ್ವಾಹಕರು ವಿಷ್ಣುವನ್ನು ಹಿಡಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಉಳಿದ ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





