ಹನೂರು ಪಟ್ಟಣ ಅಭಿವೃದ್ಧಿಗೆ ನಗರೋತ್ಥಾನ ಯೋಜನೆಯಡಿ 85 ಲಕ್ಷ ಅನುದಾನ ಬಿಡುಗಡೆ: ಶಾಸಕ ಆರ್.ನರೇಂದ್ರ

ಹನೂರು,ಜೂ.25: ಹನೂರು ಪಟ್ಟಣದ ಅಭಿವೃದ್ದಿಗೆ ನಗರೋತ್ಥಾನ ಯೋಜನೆಯಡಿ ಸುಮಾರು 85 ಲಕ್ಷ ರೂ. ಅನುದಾನ ಬಿಡುಗಡೆ ಆಗಿದೆ ಎಂದು ಶಾಸಕ ಆರ್.ನರೇಂದ್ರ ರಾಜುಗೌಡ ತಿಳಿಸಿದರು.
ಪಟ್ಟಣದ ಸಂತೇ ಪೇಟೆ ಬೀದಿಯಲ್ಲಿ ಪಟ್ಟಣ ಪಂಚಾಯತ್ ವತಿಯಿಂದ ಜರುಗಿದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಶಾಸಕರು ಮಾತನಾಡಿ ಹನೂರು ಪಟ್ಟಣಕ್ಕೆ ನಗರೋತ್ಪಾನ ಯೋಜನೆಯಡಿಯಲ್ಲಿ ಒಟ್ಟು 85 ಲಕ್ಷ ರೂಗಳು ಬಿಡುಗಡೆಯಾಗಿದ್ದು, ಪಂಚಾಯತ್ ವ್ಯಾಪ್ತಿಯ ವಿವಿಧ ವಾರ್ಡ್‍ಗಳಲ್ಲಿ ಚರಂಡಿ ನಿರ್ಮಾಣ, ಸಿಸಿ ರಸ್ತೆ ಸೇರಿದಂತೆ ಇನ್ನೂ ಅನೇಕ ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಸಾರ್ವಜನಿಕರು ಸರ್ಕಾರದ ಯೋಜನೆಗಳನ್ನು ಸರಿಯಾಗಿ ಸದ್ಬಳಕೆ ಮಾಡಿಕೂಳ್ಳಬೇಕು ಮತ್ತು ಕಾಮಗಾರಿ ನಡೆಯುವಂತಹ ಸಂದರ್ಭದಲ್ಲಿ ಗುತ್ತಿಗೆದಾರರು ಕಾಮಗಾರಿ ಗುಣಮಟ್ಟದಿಂದ ಇರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಈ ಸಂಧರ್ಭದಲ್ಲಿ ಪ.ಪಂ. ಅಧ್ಯಕ್ಷೆ ಮಮತಾ ಮಹದೇವು, ಉಪಾದ್ಯಕ್ಷ ಬಸವರಾಜು, ಮಾಜಿ ಅಧ್ಯಕ್ಷ ಬಾಲರಾಜುನಾಯ್ಡು, ಸದಸ್ಯ ರಮೇಶ್‍ನಾಯ್ಡು, ವೆಂಕಟೇಶ್, ಮುಖಂಡ ಚಿಕ್ಕತಮ್ಮಯ್ಯ, ವೆಂಕಟರಮಣನಾಯ್ಡು, ಸುದೇಶ, ಮಲ್ಲು, ರಾಜು, ಪರಶೀವ, ಇಂಜಿನಿಯರ್ ಶಿವ ಶಂಕರ ಆರಾಧ್ಯೆ, ಸೋಹನ್ ಕುಮಾರ್, ಇನ್ನಿತರರು ಹಾಜರಿದ್ದರು.





