ಕಾನೂನಿನ ಭಯವಿಲ್ಲದಿರುವುದೇ ಅಪಘಾತದ ಸಂಖ್ಯೆ ಹೆಚ್ಚಲು ಕಾರಣ: ಎಸ್ಪಿ ಅಣ್ಣಾಮಲೈ

ಚಿಕ್ಕಮಗಳೂರು, ಜೂ.25: ಭಾರತ ದೇಶದಲ್ಲಿ ಪ್ರತಿವರ್ಷ 1.64 ಲಕ್ಷ ಜನರು ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ. ಜನತೆಯಲ್ಲಿ ಕಾನೂನಿನ ಭಯವಿಲ್ಲದಿರುವುದೇ ಅಪಘಾತಗಳ ಸಂಖ್ಯೆ ಹೆಚ್ಚಾಗಲು ಕಾರಣ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಅಭಿಪ್ರಾಯಪಟ್ಟರು.
ಸೋಮವಾರ ನಗರದ ಕುವೆಂಪು ಕಲಾ ಮಂದಿರದಲ್ಲಿ ಸಂಚಾರಿ ಪೊಲೀಸ್ ಠಾಣಾ ವತಿಯಿಂದ ಹಮ್ಮಿಕೊಂಡಿದ್ದ ಸಾರ್ವಜನಿಕರಿಗೆ ಚಾಲನಾ ಪರವಾನಗಿ ವಿತರಣೆ ಹಾಗೂ ಸಂಚಾರಿ ನಿಯಮ ಕುರಿತು ತಿಳುವಳಿಕೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದಲ್ಲಿ ಶೇ.50 ರಷ್ಟು ಅಪಘಾತಗಳು ಚಾಲಕರ ನಿರ್ಲಕ್ಷ್ಯದಿಂದ ನಡೆಯುತ್ತವೆ. ಶೇ.20 ರಷ್ಟು ಅಪಘಾತಗಳು ರಸ್ತೆ ಸರಿಯಿಲ್ಲದ ಕಾರಣದಿಂದ ಸಂಭವಿಸುತ್ತದೆ. ಶೇ.15 ರಷ್ಟು ಯಾರ ತಪ್ಪೂ ಇಲ್ಲದೆ ನಡೆಯುತ್ತವೆ. ಉಳಿದ ಶೇ.15 ರಷ್ಟು ಅಪಘಾತಗಳು ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡುವುದರಿಂದ ನಡೆಯುತ್ತವೆ. ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು ಅಪಾಯಕಾರಿ. ಇದರ ಬಗ್ಗೆ ಎಲ್ಲರೂ ಗಮನಹರಿಸಬೇಕಿದೆ ಎಂದರು.
ಅಪಘಾತ ಪ್ರಕರಣಗಳಿಗೆ ಗಂಭೀರ ಶಿಕ್ಷೆ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ, ಅಪಘಾತ ಪ್ರಕರಣದಲ್ಲಿ ತಕ್ಷಣ ಜಾಮೀನು ನೀಡಲಾಗುತ್ತದೆ. ಇದರಿಂದ ಜನತೆಗೆ ಕಾನೂನಿನ ಭಯವಿಲ್ಲದಂತಾಗಿದೆ ಎಂದರು.
ಇತ್ತೀಚೆಗೆ ಭಾರತೀಯ ಮೋಟಾರು ಕಾಯಿದೆಗೆ ತಿದ್ದುಪಡಿ ಮಾಡಲಾಗಿದೆ. ಇದು ಲೋಕಸಭೆಯಲ್ಲಿ ಮಂಜೂರಾತಿ ಪಡೆದು ಈಗ ರಾಜ್ಯಸಭೆಯಲ್ಲಿ ಬಾಕಿ ಉಳಿದಿದೆ. ಈ ಕಾನೂನು ಜಾರಿಗೆ ಬಂದಲ್ಲಿ ಆಗ ಹೆಚ್ಚಿನ ಶಿಕ್ಷೆ ನೀಡಲು ಅವಕಾಶವಾಗುತ್ತದೆ. ಆಗ ಜನತೆಗೆ ಕಾನೂನಿನ ಬಗ್ಗೆ ಭಯ ಮೂಡಬಹುದು ಎಂದರು.
ವಾಹನ ಚಾಲನೆ ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ಸ್ಪೀಡ್ ಕಿಲ್ಸ್ ಯು ಎಂದು ನಾವು ಹೇಳಿದರೆ, ಯುವಕರು ಸ್ಪೀಡ್ ಥ್ರೀಲ್ ಮಿ ಎಂದು ಹೇಳುತ್ತಾರೆ. ನಮ್ಮ ತಪ್ಪಿನಿಂದ ಬೇರೆಯವರಿಗೂ ತೊಂದರೆಯಾಗುತ್ತದೆ ಎಂದರು.
ಅಪಘಾತ ಸಂಭವಿಸಿದ ತಕ್ಷಣ ಅವರ ನೆರವಿಗೆ ಧಾವಿಸಬೇಕು. ಇಂದು ಬೇರೆಯವರಿಗೆ ಆಗಿರುವುದು ನಾಳೆ ನಮಗೂ ಆಗಬಹುದು ಎಂಬ ಬಗ್ಗೆ ಯೋಚಿಸಬೇಕು. ಅಪಘಾತದಲ್ಲಿ ಸಿಲುಕಿ ಸಮಸ್ಯೆಯಲ್ಲಿರುವ ವ್ಯಕ್ತಿಗೆ ಕನಿಷ್ಠ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ತಿಳಿಸುವ ಕೆಲಸವನ್ನಾದರೂ ಮಾಡಬೇಕು ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಗೀತಾ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಲಕ್ಷಾಂತರ ವಾಹನಗಳು ರಸ್ತೆಗಿಳಿಯುತ್ತವೆ. ಇದರಿಂದ ವಾಹನ ದಟ್ಟಣೆ ಮತ್ತು ಅಪಘಾತಗಳ ಸಂಖ್ಯೆಯೂ ಹೆಚ್ಚಾಗುತ್ತಿವೆ. ಅಗತ್ಯವಿದ್ದಾಗ ವಾಹನ ಬಳಕೆ ಮಾಡುವುದರಿಂದ ಅಪಘಾತ ಮತ್ತು ವಾಹನ ದಟ್ಟಣೆ ತಡೆಯಲು ಸಾಧ್ಯ ಎಂದರು.
50 ಜನರಿಗೆ ವಾಹನ ಚಾಲನಾ ಪರವಾನಗಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಉಪಾಧ್ಯಕ್ಷ ಜಗದೀಶ್, ಸಂಚಾರಿ ಠಾಣೆ ಸಬ್ ಇನ್ಸ್ ಪೆಕ್ಟರ್ ರಮ್ಯಾ ಇದ್ದರು.







