ಭಾರತೀಯ ಶಿಕ್ಷಣ ವ್ಯವಸ್ಥೆಯ ಪಠ್ಯ ಪುಸ್ತಕ ಪುನಃ ರಚಿಸಬೇಕಿದೆ: ಶಾಸಕ ಸಿಟಿ ರವಿ
ಚಿಕ್ಕಮಗಳೂರು, ಜೂ.25: ಭಾರತೀಯ ಪಠ್ಯಪುಸ್ತಕವನ್ನು ಭಾರತದ ಬೆಳವಣಿಗೆಗೆ ಪೂರಕವಾಗಿ ಮಕ್ಕಳಿಗೆ ಪ್ರೇರಣಾತ್ಮಕವಾಗಿ ಪುನರ್ ರಚಿಸುವ ಅಗತ್ಯವಿದೆ ಎಂದು ಶಾಸಕ ಸಿ.ಟಿ.ರವಿ ಅಭಿಪ್ರಾಯಿಸಿದರು.
ಜಿಲ್ಲಾ ರಜಪೂತ ಮಂಡಳಿ ಲಯನ್ಸ್ ಭವನದಲ್ಲಿ ಇಂದು ಆಯೋಜಿಸಿದ್ದ 'ರಾಷ್ಟ್ರವೀರ ಮಹಾರಾಣಾ ಪ್ರತಾಪಸಿಂಗ್‍ಜೀ 479ನೆಯ ಜಯಂತಿ ಮತ್ತು ಸಂಘದ ವಾರ್ಷಿಕೋತ್ಸವ ಸಮಾರಂಭ'ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾಭಿಮಾನ ಪುಟಿದೆಬ್ಬಿಸುವ ಭಾರತೀಕರಣವನ್ನು ಕೇಸರಿಕರಣವೆಂದು ಯಥಾಕತಿತ ಬುದ್ಧಿಜೀವಿಗಳು ಹುಯಿಲ್ಲೆಬ್ಬಿಸುತ್ತಾರೆ. ಆಕ್ರಮಣಕಾರಿಗಳಾದವರನ್ನು ಅಲೆಕ್ಸಾಂಡರ್ ದಿ ಗ್ರೇಟ್, ಅಕ್ಬರ್ ದಿ ಗ್ರೇಟ್ ಎಂದು ಪಠ್ಯಪುಸ್ತಕದಲ್ಲಿ ಬೋಧಿಸುವ ದೇಶ ನಮ್ಮದೊಂದೇ. ಈ ಮೂಲಕ ಉಳಿಗಮಾನ್ಯ ವ್ಯವಸ್ಥೆಯನ್ನು ಬ್ರಿಟೀಷರು ಹುಟ್ಟು ಹಾಕಿದರು. ರಾಷ್ಟ್ರ ಪುರುಷರ ಸ್ಮರಣೆ ದೇಶಭಕ್ತಿಯನ್ನು ನೂರ್ಮಡಿ ಉದ್ದೀಪನಗೊಳಿಸುತ್ತದೆ ಎಂದರು.
ನಮ್ಮ ತ್ಯಾಗ ಮತ್ತು ಪ್ರತಿಮೆಗಳನ್ನು ಗುರುತಿಸಿದರೆ ಜಗತ್ತು ಅಭಿನಂದಿಸುತ್ತದೆ. ಪ್ರತಿ ಧಮನಿಗಳಲ್ಲಿ ರಜಪೂತ ಯಶೋಗಾಥೆ ಬಿಂಬಿಸಿದರೆ ರಾಷ್ಟ್ರರಕ್ಷಣೆ ಸಾಧ್ಯ. ಸಮಾಜವೇ ಸನ್ನದ್ಧ ಸೈನ್ಯದಂತೆ ಅಣಿಗೊಳ್ಳಬೇಕು. ಭಾರತದ ಶೌರ್ಯ, ಪರಾಕ್ರಮ, ತ್ಯಾಗದ ಗುಣ ಮುಂದಿನ ಪೀಳಿಗೆಗೂ ಪ್ರಸ್ತುತಪಡಿಸುವುದು ಹೆಮ್ಮೆಯ ಸಂಗತಿ ಎಂದರು.
ಡಿಎಸ್‍ಸಿಜಿ ಪಾಲಿಟೆಕ್ನಿಕ್ ಉಪನ್ಯಾಸಕಿ ನಾಗಶ್ರೀ, ರಾಜಪುತ್ರ ಎಂಬ ಸಂಸ್ಕೃತ ಪದ ಮೂಲದಿಂದ ರಜಪೂತ ಶಬ್ದ ಹುಟ್ಟಿದೆ. ಹರಿಶ್ಚಂದ್ರ, ದಶರಥ, ಶ್ರೀರಾಮನ ಸೂರ್ಯವಂಶದವರು ರಜಪೂತರು ಎಂದರು. ಈ ವೇಳೆ ಜಿಲ್ಲಾಸಂಘದ ಕಚೇರಿಗೆ ಕಟ್ಟಡ ಒದಗಿಸಿಕೊಟ್ಟ ಹೇಮಾವತಿ ಮತ್ತು ರಾಜಸಿಂಗ್ ದಂಪತಿಗಳು ಸೇರಿದಂತೆ ದಾನಿಗಳನ್ನು ಸನ್ಮಾನಿಸಲಾಯಿತು.
ಕರ್ನಾಟಕ ರಜಪೂತ ಹಿತಚಿಂತಕ ವೇದಿಕೆಯ ಅಧ್ಯಕ್ಷ ಮೈಸೂರಿನ ನಾಗರತ್ನಸಿಂಗ್‍ಜೀ ಮತ್ತು ಪ್ರಧಾನ ಕಾರರ್ಯದರ್ಶಿ ಶಿವಮೊಗ್ಗದ ರಾಮ್‍ಸಿಂಗ್‍ಜೀ 'ಮಹಾರಾಣಾ' ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬೆಳಗ್ಗೆ ನಡೆದ ಆಟೋಟ ಸ್ಪರ್ಧಾ ವಿಜೇತರಿಗೆ ಸಂಘದ ಜಿಲ್ಲಾ ಉಪಾಧ್ಯಕ್ಷ ಶಂಕರಸಿಂಗ್, ಸಹ ಕಾರ್ಯದರ್ಶಿ ಹೇಮಾವತಿ, ನಿರ್ದೇಶಕರುಗಳಾದ ಭೀಮ್ ಸಿಂಗ್, ಕುಮಾರ ಸಿಂಗ್, ನಾಗರಾಜ ಸಿಂಗ್, ಧರ್ಮಸಿಂಗ್, ಜನಾರ್ದನ ಸಿಂಗ್, ಗೋವಿಂದ ಸಿಂಗ್ ಮತ್ತಿತರರು ಬಹುಮಾನ ವಿತರಿಸಿದರು.
ಜಿಲ್ಲಾರಜಪೂತ ಮಂಡಳಿ ಸದಸ್ಯ ಬಿ.ರಣಜೀತ್ ಸಿಂಗ್ ಅಧ್ಯಕ್ಷತೆ ವಹಿಸಿದರು. ಕೋಶಾಧ್ಯಕ್ಷ ಬಿ.ಹರಿಸಿಂಗ್ ಮಹಾರಾಣಾ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಬೇಕು, ಸಂಘಕ್ಕೆ ನಿವೇಶನವನ್ನು ನೀಡಬೇಕೆಂದು ಕೋರಿದರು. ಸಂಘಟನಾ ಕಾರ್ಯದರ್ಶಿ ಗೀತಾ ಪ್ರಕಾಶ್ ಸಿಂಗ್ ಸ್ವಾಗತಿಸಿ, ಕಾರ್ಯದರ್ಶಿ ಹರೀಶ್ ಸಿಂಗ್ ವಾರ್ಷಿಕ ವರದಿ ಮಂಡಿಸಿದರು. ನಿರ್ದೇಶಕ ರೇಖಾ ಪುಷ್ಪರಾಜ ಸಿಂಗ್ ವಂದಿಸಿದರು.