ವಿಶ್ವ ವಿವಿ ರೋವರ್ಸ್ ಚಾಲೆಂಜ್‌ನಲ್ಲಿ ಮಿಂಚಿದ ಎಂಐಟಿ ತಂಡ
ಅಮೆರಿಕದ ಉಟಾಹ ಮರುಭೂಮಿಯಲ್ಲಿ ನಡೆದ ಸ್ಪರ್ಧೆ

ಮಣಿಪಾಲ, ಜೂ.25: ಅಮೆರಿಕದ ಉಟಾಹ ಮರುಭೂಮಿಯಲ್ಲಿ ಮೇ 31ರಿಂದ ಜೂ.2ರವರೆಗೆ ನಡೆದ 12ನೇ ಜಾಗತಿಕ ವಿಶ್ವವಿದ್ಯಾಲಯ ರೋವರ್ಸ್ ಚಾಲೆಂಜ್‌ನ ಅಂತಿಮ ಸುತ್ತಿನಲ್ಲಿ ಮಣಿಪಾಲದ ಮಾರ್ಸ್ ರೋವರ್ಸ್ ‘ಐರಾವತ’ ತಂಡ ವಿಶ್ವದ 36 ತಂಡಗಳಲ್ಲಿ ಏಳನೇ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದೆ.
ಉಟಾಹದ ಮಾರ್ಸ್ ಸೊಸೈಟಿ ಪ್ರತಿ ವರ್ಷ ಹಾನ್ಸ್‌ವಿಲ್ಲೆಯಲ್ಲಿ ಈ ಸ್ಪರ್ಧೆಯನ್ನು ಆಯೋಜಿಸುತ್ತಿದೆ. ಈ ಬಾರಿ ಎಂಐಟಿ ತಂಡದ ಸಾಧನೆಯ ಗಮನಾರ್ಹ ಅಂಶವೆಂದರೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಭಾರತದ ಉಳಿದ ಐದು ತಂಡಗಳ ಸಾಧನೆಗಳಿಗಿಂತ ಉತ್ತಮವಾಗಿತ್ತು.
‘ತಂಡದ ಸದಸ್ಯರಿಗಾದ ಅನುಭವ ಆಹ್ಲಾದಕರವಾಗಿತ್ತು. ಕಳೆದೊಂದು ವರ್ಷದ ಪ್ರಯತ್ನ ಮೂರು ದಿನಗಳ ಸ್ಪರ್ಧೆಯಲ್ಲಿ ಹೊರಹೊಮ್ಮಿದ ರೀತಿ ಅದ್ಭುತವಾಗಿತ್ತು. ಇದರೊಂದಿಗೆ ವಿಶ್ವದ ನಾನಾಭಾಗಗಳಿಂದ ನೂರಾರು ವಿದ್ಯಾರ್ಥಿಗಳೊಂದಿಗೆ ಬೆರೆಯುವ ಅವಕಾಶವೂ ನಮಗೆ ಸಿಕ್ಕಿತು.’ ಎಂದು ತಂಡದ ನಾಯಕ ಶಾಂತಂ ಶೋರೆವಾಲಾ ನುಡಿದರು.
ಅಮೆರಿಕದ ಮಾರ್ಸ್ ಸೊಸೈಟಿ ಜಾಗತಿಕ ರೋವರ್ಸ್ ಚಾಲೆಂಜ್ ಸರಣಿಯ ಭಾಗವಾಗಿ ವಿಶ್ವವಿದ್ಯಾಲಯಗಳ ರೋವರ್ಸ್ ಚಾಲೆಂಜ್‌ನ್ನು ಆಯೋಜಿಸುತ್ತಿದೆ. ಮಾರ್ಸ್ ಸೊಸೈಟಿ ಎಂಬುದು ಮಂಗಳ ಗ್ರಹದಲ್ಲಿ ಮಾನವನ ಅಸ್ತಿತ್ವ ಮತ್ತು ಅದರಲ್ಲಿ ವಾಸ್ತವ್ಯದ ಸಾಧ್ಯತೆಯ ಹುಡುಕಾಟಕ್ಕೆ ಒತ್ತು ನೀಡುವ ಲಾಭರಹಿತ ಸಂಘಟನೆಯಾಗಿದೆ.
ಸ್ಪರ್ಧೆಯು ನಾಲ್ಕು ಭಾಗಗಳನ್ನು ಹೊಂದಿತ್ತು. ಪ್ರತಿ ಭಾಗಗಳಿಗೂ ತಲಾ 100 ಪಾಯಿಂಟ್‌ಗಳಿದ್ದವು. ಮಣಿಪಾಲ ಮಾರ್ಸ್ ರೋವರ್ಸ್ ತಂಡ ಅತ್ಯಂತ ಸವಾಲಿನ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದಿತ್ತು. ಮಣಿಪಾಲ ತಂಡ ಒಟ್ಟು 25 ಸದಸ್ಯರನ್ನು ಹೊಂದಿತ್ತು.







