ಅಕ್ರಮ ಮರಳುಗಾರಿಕೆಯಿಂದ ಮುಲಾರಪಟ್ಣ ಸೇತುವೆ ಕುಸಿತ: ಮುನೀರ್ ಕಾಟಿಪಳ್ಳ

ಮಂಗಳೂರು, ಜೂ.25: ಬಂಟ್ವಾಳ ಎಡಪದವು ಕುಪ್ಪೆಪದವು, ಮುಲಾರಪಟ್ಣವನ್ನು ಜೋಡಿಸುವ ಮೂಲರಪಟ್ಣ ಸೇತುವೆ ಕುಸಿದು ಬಿದ್ದಿದೆ. ಇದರಿಂದ ಈ ಭಾಗದ ಜನತೆಯ ಸಂಚಾರ ಮಾರ್ಗ ಕಡಿತಗೊಂಡಿದೆ. 80ರ ದಶಕದಲ್ಲಿ ನಿರ್ಮಾಣಗೊಂಡ ಈ ಸೇತುವೆ ಕುಸಿಯಲು ಕಳಪೆ ಕಾಮಗಾರಿ ಕಾರಣ ಎಂದು ದೂರಲಾಗುತ್ತಿದೆ. ಆದರೆ ಅದಕ್ಕಿಂತ ಪ್ರಮುಖ ಕಾರಣ ಅಕ್ರಮ ಮರಳುಗಾರಿಕೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ದೂರಿದ್ದಾರೆ.
ಈ ಭಾಗದಲ್ಲಿ ಕಾರ್ಯಾಚರಿಸುವ ಮರಳು ಮಾಫಿಯಾವು ಯಾವ ಪಕ್ಷ ಇಲ್ಲಿ ಶಾಸಕರಾಗಿ ಗೆದ್ದರೂ ನಿಯಂತ್ರಣ ತಾವು ಹಿಡಿಯುವಷ್ಟು ಪ್ರಭಾವಿಯಾಗಿದೆ. ಇಲ್ಲಿನ ಅಕ್ರಮ ಮರಳುಗಾರಿಕೆಯ ವಿರುದ್ಧ ಡಿವೈಎಫ್‌ಐನಿಂದ ಸತತವಾಗಿ ಧ್ವನಿ ಎತ್ತಲಾಗಿತ್ತು ಎಂದರು.
ಈ ವೇಳೆ ಸಾವಿರಾರು ಟನ್ ಅಕ್ರಮ ಮರಳು ಮುಟ್ಟುಗೋಲು ಹಾಕಿಸಲಾಗಿತ್ತು. ಆದರೆ ಇವರೆಷ್ಟು ಬಲಾಢ್ಯರೆಂದರೆ ಸರಕಾರಿ ಇಲಾಖೆಗಳು ಅಕ್ರಮ ಮರಳನ್ನು ಸಕ್ರಮ ಮರಳನ್ನಾಗಿ ಮಾಫಿಯಾಗಳಷ್ಟೆ ಟೆಂಡರ್ ನಿಲ್ಲುವಂತೆ ನೋಡಿಕೊಂಡು ಅವರಿಗೆ ಹಸ್ತಾಂತರಿಸಿದ್ದವು. ಮುಟ್ಟುಗೋಲು ಹಾಕಿಸಿದ್ದ ನಮ್ಮನ್ನು, ನಮ್ಮ ಫಲ್ಗುಣಿ ನದಿ ಉಳಿಸಿ ಅಭಿಯಾನವನ್ನು ನೋಡಿ ಅಂದು ಮರಳು ದಂಧೆಕೋರರು ಮೀಸೆ ತಿರುವಿದ್ದರು ಎಂದು ತಿಳಿಸಿದರು.
ಈ ಎಲ್ಲ ಅಕ್ರಮಗಳು, ಗೂಂಡಾಗಿರಿ, ಹಣಬಲ, ರಾಜಕೀಯ ಆಶ್ರಯದಿಂದ ಸತತವಾಗಿ ಹಿಟಾಚಿ, ಡ್ರೆಜ್ಜಿಂಗ್ ಮಿಷನ್ ಬಳಸಿ ಪಲ್ಗುಣಿಯ ಒಡಲು ಬಗೆದುದರ ಪರಿಣಾಮ ಇಂದು ಜನರ ಜೀವನಾಡಿ ಸೇತುವೆ ಕುಸಿದು ಬೀಳಲು ಕಾರಣವಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.







