ಮಹಿಳಾ ಮತ್ತು ಮಕ್ಕಳ ಮಾರಾಟ ಸಾಗಾಟ ತಡೆಗೆ ಆಗ್ರಹ : ನಗರ ಪೊಲೀಸ್ ಆಯುಕ್ತರಿಗೆ ಮನವಿ

ಮಂಗಳೂರು, ಜೂ.25: ನಗರ ಪ್ರದೇಶದಲ್ಲಿರುವ ವಸತಿ ಗೃಹಗಳಲ್ಲಿ ಬೇರೆ ಬೇರೆ ರಾಜ್ಯಗಳಿಂದ ಹದಿಹರೆಯದ ಹೆಣ್ಣು ಮಕ್ಕಳನ್ನು ಉದ್ಯೋಗ ನೀಡುವ ಭರವಸೆಯಲ್ಲಿ ಮಧ್ಯವರ್ತಿಗಳು ಕರೆತಂದು ಅವರನ್ನು ದುರ್ಬಳಕೆ ಮಾಡುತ್ತಿದ್ದಾರೆ. ಈ ಕುರಿತು ಗಂಭೀರ ಚಿಂತನೆ ನಡೆಸಲು ಪೊಲೀಸ್ ಆಯುಕ್ತರಿಗೆ ಸಮಾನಾಸಕ್ತರ ಸಂಘಟನೆಯ ಮುಖಂಡರಿಂದ ಮನವಿ ಸಲ್ಲಿಸಲಾಯಿತು.
ಇತ್ತೀಚಿನ ದಿನಗಳಲ್ಲಿ ಪಂಪ್‌ವೆಲ್ ಲಾಡ್ಜ್‌ನಲ್ಲಿ ಪೊಲೀಸರು ಮಹಿಳೆಯರನ್ನು ರಕ್ಷಿಸಿ ಕಾನೂನು ವಿರೋಧಿ ಚಟುವಟಿಕೆಗಳನ್ನು ಭೇದಿಸಿರುವ ನಿಟ್ಟಿನಲ್ಲಿ ಉತ್ತಮ ಕಾರ್ಯವನ್ನು ಪೊಲೀಸ್ ಇಲಾಖೆ ಮಾಡಿರುವುದು ಸಾಗತಾರ್ಹ ಎಂದು ಸಮಾನಾಸಕ್ತರ ಸಂಘಟನೆಯ ಮುಖಂಡರು ತಿಳಿಸಿದ್ದಾರೆ.
ಮಸಾಜು ಪಾರ್ಲರ್, ಪಬ್‌ಗಳ ಹೆಸರಲ್ಲಿ ಮಕ್ಕಳನ್ನು ಮತ್ತು ಮಹಿಳೆಯರನ್ನು ಅನೈತಿಕ ಚಟುವಟಿಕೆಗಳಲ್ಲಿ ಬಳಸಿಕೊಳ್ಳುವುದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮಹಿಳೆಯರನ್ನು ಮತ್ತು ಮಕ್ಕಳನ್ನು ದುರ್ಬಳಕೆ ಮಾಡುತ್ತಿರುವ ಹಾಗೂ ಕಾರ್ಯಚಟುವಟಿಕೆ ನಡೆಸುತ್ತಿರುವ ಸ್ಥಳಗಳ ಮಾಲಕರಿಗೆ ಹಾಗೂ ಮಧ್ಯವರ್ತಿಗಳ ಮೇಲೆ ಕಾನೂನು ಕ್ರಮವನ್ನು ಸೂಕ್ತವಾಗಿ ಜರಗಿಸಬೇಕು ಎಂದು ಆಗ್ರಹಿಸಲಾಯಿತು.
ಜೊತೆಗೆ ಇಂತಹ ವಿಚಾರಗಳ ಬಗ್ಗೆ ಮಾಹಿತಿ ನೀಡುವವರಿಗೆ ಕೂಡ ಸೂಕ್ತವಾದ ರಕ್ಷಣೆ ಅಥವಾ ಭದ್ರತೆ ನೀಡಬೇಕು. ತುರ್ತು ರಕ್ಷಣೆಯಲ್ಲಿ ಪಾರಾದ ಮಹಿಳೆ ಮತ್ತು ಮಕ್ಕಳಿಗೆ ಸೂಕ್ತವಾದ ವ್ಯವಸ್ಥೆಯನ್ನು ಕಲ್ಪಿಸುವಂತೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಜಿಲ್ಲಾಡಳಿತದ ನೇತೃತ್ವದಲ್ಲಿ ಪ್ರತೀ 3 ತಿಂಗಳಿಗೊಮ್ಮೆ ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಗಾಗಿ ಮಹಿಳೆಯರ ಮತ್ತು ಮಕ್ಕಳ ಪರ ಕೆಲಸ ಮಾಡುವ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ಸಾಮಾಜಿಕ ಕಾರ್ಯಕರ್ತರ ಸಭೆಯನ್ನು ಕರೆಯಬೇಕು ಎಂದು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಬಾಲಕಾರ್ಮಿಕ ಪದ್ಧತಿ ವಿರೋಧಿ ಆಂದೋಲನದ ರೆನ್ನಿ ಡಿಸೋಜ, ಎನ್‌ಜಿಒ ಒಕ್ಕೂಟದ ಸುರೇಶ್ ಶೆಟ್ಟಿ, ಶಿಕ್ಷಣ ರಕ್ಷಣಾ ವೇದಿಕೆಯ ಲೋಲಾಕ್ಷ, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಅಧ್ಯಕ್ಷರಾದ ಪ್ರೇಮಿ ಫೆರ್ನಾಂಡಿಸ್, ಹ್ಯಾರಿಸ್ ಬಂಟ್ವಾಳ, ಪಿಯುಸಿಎಲ್‌ನ ರಾಷ್ಟ್ರೀಯ ಉಪಾಧ್ಯಕ್ಷ ಪಿ.ಬಿ.ಡೇಸಾ, ಪ್ರತಿಧ್ವನಿ ಜಿಲ್ಲಾ ವೇದಿಕೆಯ ನಂದಾ ಪಯಾಸ್, ಮಾನವ ಹಕ್ಕುಗಳ ಹೋರಾಟಗಾರರಾದ ಉಷಾ ನಾಯಕ್, ಹರಿಣಿ, ದುರ್ಗಪ್ರಸಾದ್, ಆಶಾ ಹೊಸಬೆಟ್ಟು, ಹಿರಿಯ ನಾಗರಿಕ ಸಹಾಯವಾಣಿಯ ಸಾತ್ವಿಕ್, ಸಮಾಜ ಕಾರ್ಯಕರ್ತರಾದ ಅಸುಂತಾ, ಜಯಂತಿ ಮೂಲ್ಯ, ಆಶಾಲತಾ, ಹಾಗೂ ಕೀರ್ತೆಶ್, ಸಹೋದಯಾ ಭೆಥನಿ ಸೇವಾ ಸಂಸ್ಥೆ ಬೆಂದೂರ್ ವೆಲ್ ಇದರ ಸಿಬ್ಬಂದಿ ಇದ್ದರು.







