ಮೀನಿಗೆ ರಾಸಾಯನಿಕ ಬಳಕೆ : ಕಠಿಣ ಕ್ರಮಕ್ಕೆ ಮುನೀರ್ ಕಾಟಿಪಳ್ಳ ಆಗ್ರಹ

ಮಂಗಳೂರು, ಜೂ.25: ಮೀನು ಕೆಡದಂತೆ ದೀರ್ಘಕಾಲ ಸಂರಕ್ಷಿಸಲು ವಿಷಕಾರಿ ರಾಸಾಯನಿಕ ಬಳಸುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಇದು ಮೀನು ಸೇವಿಸುವ ಜನತೆಯ ಆರೋಗ್ಯ ಹಾಗು ಮೀನು ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದ್ದು, ರಾಜ್ಯ ಸರಕಾರ ಮುಖ್ಯವಾಗಿ ಕರಾವಳಿ ಭಾಗದಲ್ಲಿ ಕಟ್ಟುನಿಟ್ಟಿನ ತಪಾಸಣೆ ಸಹಿತ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.
ಮಳೆಗಾಲದಲ್ಲಿ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೀನುಗಾರಿಕೆಗೆ ನಿಷೇಧ ಇರುವುದರಿಂದ ಸಾಮಾನ್ಯವಾಗಿ ಆಂಧ್ರ ಪ್ರದೇಶ, ಮಹಾರಾಷ್ಟ್ರ, ಕೇರಳ ಸಹಿತ ಹೊರರಾಜ್ಯಗಳಿಂದ ಬೃಹತ್ ಪ್ರಮಾಣದ ಮೀನುಗಳು ಕರಾವಳಿಯ ಮಾರುಕಟ್ಟೆಯನ್ನು ಪ್ರವೇಶಿಸುತ್ತದೆ. ಬಹುತೇಕ ಮೀನು ವ್ಯಾಪಾರಿಗಳು ಮೀನುಗಳನ್ನು ವಾರಗಳ ಕಾಲ ಕೆಡದಂತೆ ಸಂರಕ್ಷಿಸಲು ಉಪ್ಪು ಮತ್ತು ಮಂಜುಗಡ್ಡೆಯ ಮಿಶ್ರಣವನ್ನು ಬಳಸುತ್ತಾರೆ. ಆದರೆ ಹೆಚ್ಚಿನ ಲಾಭದ ದುರಾಸೆಗೆ ಬೀಳುವ ಕೆಲವು ಹೊರರಾಜ್ಯದ ಮೀನು ಉದ್ಯಮಿಗಳು, ಅತ್ಯಂತ ಅಗ್ಗದಲ್ಲಿ ಸಿಗುವ ಸೀಸನ್ ಗಳಲ್ಲಿ ಮೀನುಗಳನ್ನು ಶೇಖರಿಸಿಡುತ್ತಾರೆ ಎಂದರು.
ಅವುಗಳು ತಿಂಗಳುಗಟ್ಟಲೆ ಕೆಡದಂತೆ ಸಂರಕ್ಷಿಸಲು ವಿವಿಧ ರಾಸಾಯನಿಕಗಳನ್ನು ಬಳಸುತ್ತಾರೆ. ಹಾಗೂ ಹಾಗೆ ಶೇಖರಿಸಿದ ಮೀನುಗಳನ್ನು ಮಳೆಗಾಲದಲ್ಲಿ ಕೇರಳ, ಕರ್ನಾಟಕದ ಕರಾವಳಿಯಂತಹ ಮೀನಿಗೆ ವಿಪರೀತ ಬೇಡಿಕೆ ಇರುವ ಕಡೆಗಳಿಗೆ ರವಾನಿಸಿ ದೊಡ್ಡ ಪ್ರಮಾಣದಲ್ಲಿ ಲಾಭ ಗಳಿಸುತ್ತಾರೆ ಎಂದರು.
ಈ ರಾಸಾಯನಿಕಗಳು ಮನುಷ್ಯನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟುಮಾಡುವ ವಿಷಕಾರಿ ಅಂಶಗಳನ್ನು ಹೊಂದಿದೆ ಎಂದು ಹೇಳಲಾಗುತ್ತಿದ್ದು, ಇಂತಹ ಮೀನು ಸೇವಿಸಿದವರು ಗಂಭೀರವಾದ ಆರೋಗ್ಯದ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.
ಕೇರಳ ರಾಜ್ಯ ಸರಕಾರ ಈ ಕುರಿತು ಎಚ್ಚರ ವಹಿಸಿದ್ದು, ಇಂತಹ ರಾಸಾಯನಿಕ ಬಳಸಿದ ಮೀನುಗಳು ರಾಜ್ಯ ಪ್ರವೇಶಿಸದಂತೆ ತಡೆಯುತ್ತಿದೆ. ಆದರೆ ಕರ್ನಾಟಕದ ಕರಾವಳಿ ಭಾಗದಲ್ಲಿ ಆಹಾರ ಸುರಕ್ಷತಾ ಇಲಾಖೆ, ಮೀನುಗಾರಿಕಾ ಇಲಾಖೆ , ಆರೋಗ್ಯ ಇಲಾಖೆಗಳು ದುರ್ಬಲವಾಗಿದ್ದು, ಇಂತಹ ಮೀನುಗಳು ಸುಲಭವಾಗಿ ಮಾರುಕಟ್ಟೆಯನ್ನು ಪ್ರವೇಶಿಸಿರುವ ಸಾಧ್ಯತೆ ಇದೆ. ಈಗಾಗಲೆ ಈ ಕುರಿತು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ದೂರುಗಳು ಕೇಳಿಬರುತ್ತಿದೆ. ಸಹಜವಾಗಿ ಜನತೆ ಆತಂಕಗೊಂಡಿದ್ದಾರೆ ಎಂದು ತಿಳಿಸಿದರು.
ಮಂಗಳೂರು, ಉಡುಪಿ ಸೇರಿದಂತೆ ಕರಾವಳಿಯ ಮೀನುಗಾರಿಕಾ ಉದ್ಯಮ ವಿಶ್ವಾಸಾರ್ಹತೆಗೆ ಹೆಸರಾಗಿದೆ. ಹೊರ ರಾಜ್ಯದ ಕೆಲವು ಲಾಭಕೋರ ಉದ್ಯಮಿಗಳು ಇಲ್ಲಿನ ಮಾರುಕಟ್ಟೆಗೆ ರಾಸಾಯನಿಕ ಲೇಪಿತ ಮೀನುಗಳನ್ನು ತರುತ್ತಿರುವುದರಿಂದ ದಿನನಿತ್ಯ ಮೀನು ಸೇವಿಸುವ ಬಹುಸಂಖ್ಯಾತ ಜನತೆ ಮೀನು ಸೇವಿಸಲು ಭಯಪಡುತ್ತಿದ್ದಾರೆ. ಇದು ಇಲ್ಲಿನ ಆಹಾರ ಕ್ರಮದ ಮೇಲೆ ಪರಿಣಾಮ ಬೀರುತ್ತದೆ. ಮಾರುಕಟ್ಟೆಯನ್ನು ಮಂದಗೊಳಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಮೀನು ಮಾರಾಟದಿಂದಲೆ ಜೀವನ ನಡೆಸುವ ಸಹಸ್ರಾರು ಸಣ್ಣಪುಟ್ಟ ಮಾರಾಟಗಾರರು ಖರೀದಿಸುವ ಜನರಿಲ್ಲದೆ ತಮ್ಮ ದುಡಿಮೆಯನ್ನು ಕಳೆದುಕೊಳ್ಳುವಂತಾಗುತ್ತಿದೆ. ಈ ಭಾಗದ ಆರ್ಥಿಕತೆ, ಮಾರುಕಟ್ಟೆಗಳು ಮೀನುಗಾರಿಕೆ ಆಧಾರಿತವಾಗಿ ರೂಪುಗೊಂಡಿದೆ. ಇಲ್ಲಿಂದ ಅತಿ ಹೆಚ್ಚು ಮೀನು ವಿದೇಶಗಳಿಗೆ ರಫ್ತಾಗುತ್ತದೆ. ರಾಸಾಯನಿಕ ಬಳಸುವ ಸುದ್ದಿ, ಕೆಲವು ಉದ್ಯಮಿಗಳ ಲಾಭಕೋರತನದಿಂದ ಈ ಎಲ್ಲ ವ್ಯವಹಾರಗಳ ಮೇಲೆ ಗಂಭೀರ ಪರಿಣಾಮಗಳು ಬೀರುವ ಸಾಧ್ಯತೆಯಿದೆ ಎಂದು ಹೇಳಿದರು.
ಈ ಎಲ್ಲ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಕರ್ನಾಟಕ ಸರ್ಕಾರ ರಾಸಾಯನಿಕ ಬಳಸಿದ ಮೀನುಗಳು ರಾಜ್ಯಪ್ರವೇಶಿಸದಂತೆ ತಡೆಯಬೇಕು. ಕೇರಳ ಸರಕಾರದ ಮಾದರಿಯಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ರಾಜ್ಯದ ಒಳಗಡೆ ತೀವ್ರ ತಪಾಸಣೆಯ ಮೂಲಕ ರಾಸಾಯನಿಕ ಲೇಪಿತ ಮೀನುಗಳು ಮಾರುಕಟ್ಟೆಯಲ್ಲಿ ಮಾರಾಟವಾಗದಂತೆ ಎಚ್ಚರ ವಹಿಸಬೇಕು, ಆ ಮೂಲಕ ಮೀನು ತಿನ್ನುವ ಜನರಲ್ಲಿ ಮೂಡಿರುವ ಆತಂಕ ದೂರಮಾಡಬೇಕು ಎಂದು ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ಸರಕಾರವನ್ನು ಒತ್ತಾಯಿಸಿದ್ದಾರೆ.







