ಮೈಸೂರು: ಗ್ರಾ.ಪಂ ನೌಕರರಿಗೆ ಇಎಫ್‍ಎಂಎಸ್ ಮೂಲಕ ವೇತನ ಕೊಡಲು ಒತ್ತಾಯಿಸಿ ಧರಣಿ

ಮೈಸೂರು,ಜೂ.25: ಗ್ರಾಮ ಪಂಚಾಯತ್ ನ 51,114 ನೌಕರರಿಗೆ ಸರ್ಕಾರದಿಂದ ಇಎಫ್ ಎಂಎಸ್ ಮೂಲಕ ವೇತನ ಕೊಡಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.
ಮೈಸೂರಿನ ತಾಲೂಕು ಪಂಚಾಯತ್ ಕಚೇರಿ ಎದುರು ಸೋಮವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ, ಗ್ರಾಮ ಪಂಚಾಯತ್ ನೌಕರರು ಮಾಸಿಕ ಸಂಬಳ ಸಿಗದೇ ಸರ್ಕಾರ ನಿಗದಿಗೊಳಿಸಿರುವ ಕನಿಷ್ಠ ವೇತನ ಜಾರಿಯಾಗದೇ ಬಹಳ ಕಷ್ಟದಲ್ಲಿದ್ದಾರೆ. ಗ್ರಾಮ ಪಂಚಾಯತ್ ನ 51,114 ನೌಕರರಿಗೆ ಸರ್ಕಾರದಿಂದ ಇಎಫ್ ಎಂಎಸ್ ಮೂಲಕ ವೇತನ ಕೊಡಿಸಲು ಆದೇಶ ಹೊರಡಿಸಲಾಗಿದೆ. ಸರ್ಕಾರದ ಆದೇಶದಂತೆ 51,114 ನೌಕರರಿಗೆ ಸರ್ಕಾರದಿಂದ ಇಎಫ್ ಎಂಎಸ್ ಮೂಲಕ ವೇತನ ಸಿಗಬೇಕು. ಎಸೆಸೆಲ್ಸಿ ಪಾಸಾದ 10 ವರ್ಷ ಸೇವೆ ಸಲ್ಲಿಸಿದ ಬಿಲ್ ಕಲೆಕ್ಟರ್ ಗಳಿಗೆ ಸಿಗುತ್ತಿದ್ದ ಗ್ರೇಡ್ 2 ಕಾರ್ಯದರ್ಶಿ ಬಡ್ತಿಯನ್ನು ಪುನಃ ಸಿಗುವಂತೆ ಸೂಕ್ತ ಆದೇಶ ಹೊರಡಿಸಬೇಕು. ಗ್ರಾಮ ಪಂಚಾಯತ್ ನೌಕರರಿಗೆ ಪೆನ್ಶನ್, ವೈದ್ಯಕೀಯ ವೆಚ್ಚ, ಗ್ರಾಜ್ಯುಯೇಟ್ ಗಳು ಸಿಗುವಂತೆ ಆದೇಶ ನೀಡಬೇಕು. ಅವಶ್ಯಕತೆಗಳಿಗನುಗುಣವಾಗಿ ವಿವಿಧ ಹುದ್ದೆಗಳನ್ನು ಸೃಷ್ಟಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಅಧ್ಯಕ್ಷ ವರುಣ ನಾಗರಾಜ್, ತಾಲೂಕು ಕಾರ್ಯದರ್ಶಿ ಮಣಿಗೌಡ, ತಾಲೂಕು ಪದಾಧಿಕಾರಿ ಬಸವಣ್ಣ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.





