ಬಡವರ ಸಂಕಷ್ಟಗಳಿಗೆ ಸ್ಪಂದಿಸಿದ್ದು ನನ್ನ ಗೆಲುವಿಗೆ ಸಹಕಾರಿಯಾಯಿತು: ಶಾಸಕ ಅಪ್ಪಚ್ಚು ರಂಜನ್
ಸುಂಟಿಕೊಪ್ಪ,ಜೂ.25: ಜನರ, ಬಡವರ ಸಂಕಷ್ಟಗಳಿಗೆ ಸ್ಪಂದಿಸಿ ಪರಿಹಾರ ದೊರಕಿಸಿ ಕೊಡುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ನನ್ನ ಗೆಲುವಿಗೆ ಸಹಕಾರಿಯಾಯಿತು ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಹೇಳಿದರು.
ಇಲ್ಲಿನ ಮಂಜನಾಥಯ್ಯ ಮಿನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಖ್ಯ ಮಂತ್ರಿಯಾದ 24 ಗಂಟೆಯಲ್ಲಿ ರೈತರ ಸಹಕಾರಿ ಹಾಗೂ ವಾಣಿಜ್ಯ ಬ್ಯಾಂಕಿನಲ್ಲಿರುವ ಎಲ್ಲಾ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಿಸಿದ ಹೆಚ್.ಡಿ.ಕುಮಾರಸ್ವಾಮಿ ಮಾತಿಗೆ ತಪ್ಪಿದ್ದಾರೆ. ಈಗ ಸಣ್ಣ ರೈತರ ಸಾಲ ಮಾತ್ರ ಮನ್ನಾ ಮಾಡುವುದಾಗಿ ಸಬೂಬು ಹೇಳುತ್ತಾ ರೈತರನ್ನು ವಂಚಿಸುತ್ತಿದ್ದಾರೆ. ಈ ಸಮ್ಮಿಶ್ರ ಸರಕಾರ 6 ತಿಂಗಳಿನಲ್ಲಿ ಪತನವಾಗಲಿದೆ ಎಂದರು.
ಮುಂದಿನ ಲೋಕಸಭೆ ಚುನಾವಣೆ ಹಾಗೂ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಶ್ರಮಿಸಬೇಕೆಂದು ಅವರು ಕರೆ ನೀಡಿದರು.
ಹಿರಿಯ ಬಿಜೆಪಿ ಮುಖಂಡ ಯಂಕನ ಕರುಂಬಯ್ಯ ಮಾತನಾಡಿ ಅಪ್ಪಚ್ಚು ರಂಜನ್ ಮಾಡಿದ ಅಭಿವೃದ್ದಿ ಕಾರ್ಯಗಳೇ ಅವರು 5ನೇ ಬಾರಿ ಗೆಲುವು ಸಾಧಿಸಲು ಕಾರಣವಾಯಿತು ಎಂದೂ ಹೇಳಿದರು. ಅಂದಗೋವೆಯ ಬಿಜೆಪಿ ಹಿರಿಯ ಕಾರ್ಯಕರ್ತರಾದ ಚಿಕ್ಕಂಡ ಉತ್ತಪ್ಪ ಮಾತನಾಡಿ, ಜಾತಿ ಭೇದವಿಲ್ಲದೆ ಎಲ್ಲಾ ಜನಾಂಗದವರ ಅಭಿವೃದ್ಧಿಗೆ ಕೈಜೋಡಿಸಿದ್ದರಿಂದ ರಂಜನ್ ಗೆಲುವು ಸಾಧಿಸಿದರು ಎಂದರು.
ವೇದಿಕೆಯಲ್ಲಿ ತಾ.ಪಂ.ಸದಸ್ಯೆ ಒಡಿಯಪ್ಪನ ವಿಮಾಲಾವತಿ, ವಿಎಸ್‍ಎಸ್ ಬ್ಯಾಂಕ್ ಅಧ್ಯಕ್ಷ ಎನ್.ಸಿ.ಪೊನ್ನಪ್ಪ(ಕ್ಲೈವಾ), ಮಡಿಕೇರಿ ಕ್ಷೇತ್ರ ಬಿಜೆಪಿ ಅಧ್ಯಕ್ಷ ಎಂ.ಎನ್.ಕೊಮರಪ್ಪ, ನಗರ ಬಿಜೆಪಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್, ಗ್ರಾ.ಪಂ.ಸದಸ್ಯರಾದ ಬಿ.ಎಂ.ಸುರೇಶ್, ಸಿ.ಚಂದ್ರ, ಗಿರೀಜಾ, ಹಿರಿಯ ಕಾರ್ಯಕರ್ತರಾದ ಅಶೋಕ್ ಶೇಟ್, ಬಿ.ಕೆ.ಮೋಹನ್, ಧನುಕಾವೇರಪ್ಪ, ಬಿ.ಐ.ಭವಾನಿ, ವಿನೋದ್, ರವಿ ಎಸ್ ಸಿ ಮೋರ್ಚಾ ಅಧ್ಯಕ್ಷ ತೇಜಸ್, ನಗರ ಘಟಕದ ಕಾರ್ಯದರ್ಶಿ ಬಿ.ಕೆ.ಪ್ರಶಾಂತ್ ಇತರರು ಇದ್ದರು.







