ಖ್ಯಾತ ಕಲಾವಿದೆ ಸಹನಾ ಸಾಮ್ರಾಜ್ ಅವರಿಂದ ಶಾಂತಿವನದಲ್ಲಿ ಗಾನ ಸೌರಭ ಕಾರ್ಯಕ್ರಮ

ಬೆಳ್ತಂಗಡಿ,ಜೂ.25: ಧರ್ಮಸ್ಥಳದ ಶಾಂತಿವನ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯದಲ್ಲಿ ಅಂತಾರಾಷ್ಟ್ರೀಯ ಖ್ಯಾತ ಕಲಾವಿದೆ, ಶಾಂತಿವನದಲ್ಲಿ ಚಿಕಿತ್ಸೆಗಾಗಿ ಬಂದಿರುವ ಸಾಧಕಿ ವಿದುಷಿ ಸಹನಾ ಸಾಮ್ರಾಜ್ ಅವರಿಂದ ಸೋಮವಾರ ಸಂಜೆ ಶಾಂತಿವನದಲ್ಲಿ ಗಾನ ಸೌರಭ ಕಾರ್ಯಕ್ರಮ ನಡೆಯಿತು.
ಎಳೆಯ ವಯಸ್ಸಿನಲ್ಲಿಯೇ, ವಿವಿಗಳಿಂದ, ರಿಯಾಲಿಟಿ ಶೋಗಳಿಂದ, ದೂರದರ್ಶನ, ರೆಡಿಯೋ ಮೊದಲಾದವುಗಳಿಂದ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಸಹನಾ ಅವರು ಸೋಮವಾರ ಸಂಜೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶಾಂತಿವನ ಸಂಸ್ಥೆಯ ವತಿಯಿಂದ ಪ್ರಕೃತಿ ಚಿಕಿತ್ಸಾಲಯದಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ಶಾಸ್ತ್ರೀಯ ಸಂಗೀತವನ್ನು ನಡೆಸಿಕೊಟ್ಟರು. ಇವರೊಡನೆ ಮೃದಂಗದಲ್ಲಿ ಪುತ್ತೂರಿನ ನಿಕ್ಷಿತ್, ವಯೋಲಿನ್‍ನಲ್ಲಿ ಶಿವಮೊಗ್ಗ ಮತ್ತೂರಿನ ವಿಶ್ವಜಿತ್ ಎಂ. ವಿ. ಸಹಕರಿಸಿದರು.
ಗಾನ ಸೌರಭದಲ್ಲಿ ಸಿದ್ದರಾಮಯ್ಯ ಅವರು ಕಾರ್ಯಕ್ರಮದ ಕೊನೆಯವರೆಗೂ ಸಂಗೀತವನ್ನು ಆಸ್ಪಾದಿಸಿದರು. ಕಾರ್ಯಕ್ರಮದಲ್ಲಿ ಭಕ್ತಿ ಗಾನದ ರಸಧಾರೆ ಹರಿದು ಬಂತು. ಶಾಂತಿವನದ ಸಾಧಕರು, ವೈದ್ಯರುಗಳು, ಸಿಬ್ಬಂದಿಗಳು ಹಾಗೂ ಆಗಮಿಸಿದ ಗಣ್ಯರು ಕೂಡ ಗಾನ ಸೌರಭದಲ್ಲಿ ಪಾಲ್ಗೊಂಡು ಸಂಗೀತವನ್ನು ಆಲಿಸಿದರು.
ಕಾರ್ಯಕ್ರಮವನ್ನು ನಡೆಸಿಕೊಟ್ಟ ಸಹನಾ ಸಾಮ್ರಾಜ್, ನಿಕ್ಷಿತ್ ಹಾಗೂ ವಿಶ್ವಜಿತ್ ಅವರನ್ನು ಮಾಜಿ ಸಿಎಂ ಸಿದ್ದರಾಮಯ್ಯ, ಶಾಂತಿವನ ಸಂಸ್ಥೆಯ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ಹಾಗೂ ಮುಖ್ಯ ವೈದಾಧಿಕಾರಿ ಡಾ.ಪ್ರಶಾಂತ್ ಶೆಟ್ಟಿ ಅವರು ಗೌರವಿಸಿದರು. ಈ ಸಂದರ್ಭ ಎಂಎಲ್‍ಸಿ ಐವನ್ ಡಿಸೋಜಾ, ಮಾಜಿ ಶಾಸಕ ಗೋಪಾಲ ಪೂಜಾರಿ, ಯೆನಪೋಯ ಸಂಸ್ಥೆಯ ಅಧ್ಯಕ್ಷ ಅಬ್ದುಲ್ಲ ಕುಂಞಿ, ಯು. ಟಿ. ಇಫ್ತಿಕಾರ್, ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ನಿರ್ದೇಶಕ ಡಾ.ಐ. ಶಶಿಕಾಂತ್ ಜೈನ್, ಆಯುಪ್ ಆಡಳಿತಾಧಿಕಾರಿ ಮಂಜುನಾಥ್, ಮಂಗಳೂರಿನ ಸಂಗೀತ ವಿದ್ವಾನ್ ನಿತ್ಯಾನಂದ ರಾವ್, ದೇವಳದ ಪಾರುಪತ್ಯಗಾರ ಲಕ್ಷ್ಮೀನಾರಾಯಣ, ಜಮಾ ಉಗ್ರಾಣದ ಹಿರಿಯ ಮುತ್ಸದ್ದಿ ಬಿ. ಭುಜಬಲಿ, ಮಲ್ಲಿನಾಥ್ ಜೈನ್, ನಿವೃತ್ತ ಪ್ರಾಧ್ಯಾಪಕ ಉದಯ ಕುಮಾರ್ ಮಲ್ಲ ಮತ್ತಿತರು ಇದ್ದರು.







