ಕೃಷಿ ಶಿಕ್ಷಣ ಖಾಸಗೀಕರಣಕ್ಕೆ ವಿರೋಧ: ಪೊನ್ನಂಪೇಟೆ ಅರಣ್ಯ ಕಾಲೇಜು ವಿದ್ಯಾರ್ಥಿಗಳಿಂದ ಧರಣಿ

ಮಡಿಕೇರಿ ಜೂ.25: ಕೃಷಿ ಶಿಕ್ಷಣವನ್ನು ಖಾಸಗೀಕರಣಗೊಳಿಸುವ ಕ್ರಮವನ್ನು ವಿರೋಧಿಸಿ ಪೊನ್ನಂಪೇಟೆ ಅರಣ್ಯ ಕಾಲೇಜು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಧರಣಿ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ.
ಇಂದು ಕಾಲೇಜು ಆವರಣದಲ್ಲಿ ಧರಣಿ ಆರಂಭಿಸಿದ ಬಿಎಸ್ಸಿ ಅರಣ್ಯ ವಿಭಾಗದ ವಿದ್ಯಾರ್ಥಿಗಳು ಸರಕಾರದ ಕ್ರಮವನ್ನು ಖಂಡಿಸಿದರು. ಕೃಷಿ ಪ್ರಧಾನವಾದ ಭಾರತ ದೇಶದಲ್ಲಿ ಕೃಷಿ ಶಿಕ್ಷಣ ವ್ಯವಸ್ಥೆ ಸರಕಾರದ ಅಧೀನದಲ್ಲೇ ನಡೆಯಬೇಕು ಹೊರತು ಖಾಸಗಿ ಸಹಭಾಗಿತ್ವದಲ್ಲಿ ನಡೆಯಬಾರದೆಂದು ಒತ್ತಾಯಿಸಿದರು.
ಕೃಷಿ ಕ್ಷೇತ್ರದ ಅಭ್ಯುದಯಕ್ಕಾಗಿ ಕೃಷಿ ಶಿಕ್ಷಣವನ್ನು ಜಾರಿಗೆ ತಂದು ಸರಕಾರದ ಮೂಲಕ ಶೈಕ್ಷಣಿಕ ವ್ಯವಸ್ಥೆಯನ್ನು ನಡೆಸಿಕೊಂಡು ಬರಲಾಗಿದೆ. ಇಂದು ಪ್ರತಿಯೊಂದು ಕ್ಷೇತ್ರವೂ ಖಾಸಗೀಕರಣದತ್ತ ಮುಖ ಮಾಡುತ್ತಿದ್ದು, ಇದರಿಂದ ಲಾಭಕ್ಕಿಂತ ಹೆಚ್ಚು ನಷ್ಟವೇ ಆಗಿದೆ ಎಂದು ಧರಣಿ ನಿರತ ವಿದ್ಯಾರ್ಥಿಗಳು ಅಭಿಪ್ರಾಯಪಟ್ಟರು.
ಇದೀಗ ಖಾಸಗೀಕರಣವೆಂಬ ಭೂತ ಕೃಷಿ ಶಿಕ್ಷಣವನ್ನು ಕೂಡ ಆವರಿಸಿದ್ದು, ಇದನ್ನು ತೀವ್ರವಾಗಿ ವಿರೋಧಿಸುವುದಾಗಿ ತಿಳಿಸಿದರು. ಖಾಸಗೀಕರಣ ಪದ್ಧತಿಯಿಂದ ಕೃಷಿ ಶಿಕ್ಷಣವನ್ನು ಮುಕ್ತಗೊಳಿಸಬೇಕೆಂದು ಒತ್ತಾಯಿಸಿದ ವಿದ್ಯಾರ್ಥಿಗಳು ಶಿಕ್ಷಣ ಜ್ಞಾನವನ್ನು ನೀಡುವ ದಾರಿಯಾಗಬೇಕೇ ಹೊರತು ದುಡಿಮೆಯ ಭಂಡಾರವಾಗಬಾರದು ಎಂದರು.
ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಖಾಸಗೀಕರಣ ವ್ಯವಸ್ಥೆ ಪ್ರವೇಶ ಪಡೆದು ಸಾಕಷ್ಟು ಅಡೆತಡೆಗಳು ಎದುರಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗುತ್ತಿದ್ದಾರೆ. ಉದೋಗಕ್ಕಾಗಿ ಪರದಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಕೃಷಿ ಶಿಕ್ಷಣವನ್ನು ಕೂಡ ಖಾಸಗೀಕರಣಗೊಳಿಸಲಾಗುತ್ತಿದ್ದು, ಇದರಿಂದ ಕೃಷಿ ವಿದ್ಯಾರ್ಥಿಗಳು ಸಂಕಷ್ಟವನ್ನು ಎದುರಿಸುವ ಸಾಧ್ಯತೆಗಳಿದೆ ಎಂದು ಧರಣಿ ನಿರತರು ಆರೋಪಿಸಿದರು.
ಕೃಷಿ ಶಿಕ್ಷಣದ ಮೂಲಕ ಕೃಷಿ ಹಾಗೂ ನಮ್ಮ ದೇಶವನ್ನು ಮುನ್ನಡೆಸುವ ಪ್ರಮುಖ ಪಾತ್ರ ವಹಿಸುವ ವಿದ್ಯಾರ್ಥಿಗಳನ್ನು ಅವರ ಪ್ರತಿಭೆಯ ಮೂಲಕ ನೇಮಕಗೊಳಿಸಬೇಕೇ ಹೊರತು ಖಾಸಗೀಕರಣದ ಮೂಲಕವಲ್ಲವೆಂದರು. ಸರಕಾರ ನಮ್ಮ ಬೇಡಿಕೆ ಈಡೇರಿಸುವವರೆಗೆ ಹಂತಹಂತವಾಗಿ ಧರಣಿ ಸತ್ಯಾಗ್ರಹ ನಡೆಯಲಿದ್ದು, ಜೂ.26 ರಂದು ಕೂಡ ತರಗತಿ ಬಹಿಷ್ಕರಿಸಿ ಧರಣಿ ನಡೆಸುವುದಾಗಿ ತಿಳಿಸಿದರು. ಪ್ರತಿಭಟನೆಯ ಹಿನ್ನೆಲೆ ಮುಂದಿನ ತಿಂಗಳು ನಡೆಯುವ ಪರೀಕ್ಷೆಗಳನ್ನು ಮುಂದೂಡುವಂತೆ ವಿವಿ ಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ವಿದ್ಯಾರ್ಥಿಗಳು ಗಮನ ಸೆಳೆದರು.
ಟಿ.ಎನ್.ಸಿದ್ಧಾರ್ಥ, ಧನುಷ್ ಕುಮಾರ್, ರಫೀಕ್, ಡಿ.ಎಸ್.ವಿನಯ್ ಸೇರಿದಂತೆ ಅನೇಕ ಮಂದಿ ವಿದ್ಯಾರ್ಥಿಗಳು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.







