ಮನೆಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಸೊತ್ತು ದರೋಡೆ

ಮಂಗಳೂರು, ಜೂ.26: ಮನೆಯ ಹಿಂಬಾಗಿಲಿನ ಮೂಲಕ ರಾತ್ರಿ ವೇಳೆ ನುಗ್ಗಿದ ದರೋಡೆಕೋರರು ಬೆಡ್‌ರೂಮಿನ ಕಪಾಟಿನಲ್ಲಿದ್ದ 2 ಲಕ್ಷ ರೂ. ಬೆಲೆಬಾಳುವ ಬಂಗಾರದ ಆಭರಣ ಹಾಗೂ 30 ಸಾವಿರ ರೂ. ನಗದನ್ನು ದೋಚಿದ ಘಟನೆ ತಾಲೂಕಿನ ಇಡ್ಯಾ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಎಸ್.ನಾಗೇಶ್ ಕಾಮತ್ ಎಂಬವರ ಮನೆಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಸೊತ್ತನ್ನು ಕಳವುಗೈಯಲಾಗಿದೆ. ಮಂಗಳವಾರ ಬೆಳಗ್ಗೆ 3 ಗಂಟೆಗೆ ನಾಗೇಶ್ ಕಾಮತ್ ಅವರ ವಾಸ್ತವ್ಯದ ಮನೆಯ ಹಿಂದಿನ ಬಾಗಿಲನ್ನು ಕಳ್ಳರು ಒಡೆದು ಮನೆಯ ಬೆಡ್ ರೂಮಿನ ಕಪಾಟಿನಲ್ಲಿಟ್ಟಿದ್ದ ಸುಮಾರು 2 ಲಕ್ಷ ರೂ. ಬೆಲೆಯ ವಿವಿಧ ನಮೂನೆಯ ಚಿನ್ನಾಭರಣ ಹಾಗೂ 30 ಸಾವಿರ ರೂ. ನಗದನ್ನು ದರೋಡೆ ಮಾಡಿದ್ದಾರೆ. ಪತಿ, ಪತ್ನಿ ಬೆಡ್ ರೂಮಿನಲ್ಲಿ ನಿದ್ರಿಸುತ್ತಿದ್ದಾಗ ಡ್ರಾವರ್ ತೆರೆಯುವ ಶಬ್ದ ಕೇಳಿ ನಾಗೇಶ್‌ಗೆ ಎಚ್ಚರವಾಗಿ ಬೊಬ್ಬೆ ಹಾಕಿದ್ದಾರೆ. ಮಂಕಿ ಕ್ಯಾಪ್ ಧರಿಸಿ ರೈನ್ ಕೋಟ್ ತರದ ಅಂಗಿ ಧರಿಸಿದ್ದ ನಾಲ್ವರು ದರೋಡೆಕೋರರು ಮನೆಯಿಂದ ಪರಾರಿಯಾಗಿದ್ದಾರೆ.
ಆರೋಪಿತರು ದರೋಡೆ ಮಾಡಿದ ಸೊತ್ತಿನ ಒಟ್ಟು ಮೌಲ್ಯ 2 ಲಕ್ಷದ 30 ಸಾವಿರ ಎಂದು ಅಂದಾಜಿಸಲಾಗಿದೆ. ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





