ಕೋಟೆಕಾರಿನಲ್ಲಿ ಮಳೆಯ ಆರ್ಭಟದಿಂದ ರಸ್ತೆಗಳು ಜಲಾವೃತ

ಉಳ್ಳಾಲ,ಜೂ.26: ಜಿಲ್ಲೆಯಲ್ಲಿ ಕಳೆದು ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಿಂದ ಮಾಡೂರು ಶ್ರೀ ಪಾಡಂಗರ ಭಗವತಿ ಕ್ಷೇತ್ರಕ್ಕೆ ಸಂಪರ್ಕಿಸುವ ರಸ್ತೆ ಜಲಾವೃತಗೊಂಡು ಸುಮಾರು 100ಕ್ಕೂ ಹೆಚ್ಚು ಮನೆಗಳು ಸಂಪರ್ಕದಿಂದ ಕಡಿತಗೊಂಡಿದ್ದು, 5ಕ್ಕೂ ಹೆಚ್ಚು ಮನೆಗಳ ಮೆಟ್ಟಿಲುವರೆಗೆ ನೀರು ತುಂಬಿದ್ದು. ಇನ್ನು ಸತತ ಮಳೆ ಸುರಿದರೆ ಮನೆಯೊಳಗೆ ನೀರು ತುಂಬುವ ಸಾಧ್ಯತೆಯಿದ್ದು ಈ ಭಾಗದ ಜನರು ಆತಂಕಗೊಂಡಿದ್ದಾರೆ.
ಕಿಂಡಿ ಅಣೆಕಟ್ಟೆಯಿಂದ ಸಮಸ್ಯೆ...
ಮಾಡುರು ಪ್ರದೇಶದಿಂದ ಒಳ ರಸ್ತೆಯಾಗಿ ಕೋಟೆಕಾರು ಸಂಪರ್ಕಿಸುವ ರಸ್ತೆ ಇದಾಗಿದ್ದು, ಜಿಲ್ಲಾ ಪಂಚಾಯತ್ ಅನುದಾನದಡಿ ಈ ಭಾಗದಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಆದರೆ ಅದು ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವುದರಿಂದ ಸಮಸ್ಯೆ ಉದ್ಭವಿಸಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಕಿರಿದಾದ ಕಿಂಡಿ ಅಣೆಕಟ್ಟು ದೊಡ್ಡ ಪ್ರಮಾಣದಲ್ಲಿ ಹರಿಯುವ ನೀರನ್ನು ತಡೆಯಲು ಸಾಧ್ಯವಾಗದೆ, ಅದು ತೋಡಿನಲ್ಲಿ ಸಾಗುವ ಬದಲು ರಸ್ತೆಯಲ್ಲಿ ಹರಿದು ಸಮಸ್ಯೆ ನಿರ್ಮಾಣವಾಗಿದೆ. ಸುನಾರು ಒಂದು ಕಿ.ಮೀ ಉದ್ದದ ರಸ್ತೆಯಿಡೀ ಜಲಾವೃತಗೊಂಡು ಮೊಣಕಾಲುವರೆಗೆ ನೀರು ತುಂಬಿದೆ. ಪರಿಣಾಮ ಆ ರಸ್ತೆಯಲ್ಲಿ ತೆರಳುವ ವಾಹನಗಳು ತೆರಳಲು ಸಾಧ್ಯವಾಗದೆ, ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ , ಉದ್ಯೋಗಿಗಳು ಕೆಲಸ ಕಾರ್ಯಗಳಿಗೆ ತೆರಳಲು ಸಾಧ್ಯವಾಗದೆ ಸಂಕಷ್ಟವನ್ನು ಎದುರಿಸಿದ್ದಾರೆ.
ಪಂಚಾಯಿತಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು: ನೀರಿನ ಸಮಸ್ಯೆಯಿಂದ ಆಕ್ರೋಶಗೊಂಡ ಈ ಭಾಗದ ಸಾರ್ವಜನಿಕರು ಕೋಟೆಕಾರು ಪಟ್ಟಣ ಪಂಚಾಯಿತಿಗೆ ಮುತ್ತಿಗೆ ಹಾಕಿದರು. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ದೂರು ನೀಡಿದರೂ ಸ್ಪಂಧಿಸದೆ ಬೇಜವಾಬ್ದಾರಿ ನೀತಿ ಅನುಸರಿಸಿದ್ದೀರಿ. ಮನೆಯೊಳಗೆ ನೀರು ಬಂದಲ್ಲಿ ಪಂಚಾಯಿತಿಯೇ ನೇರ ಹೊಣೆಯಾಗುತ್ತದೆ. ಎರಡು ದಿನಗಳೊಳಗೆ ಸರಿಪಡಿಸದೇ ಇದ್ದಲ್ಲಿ ಬೃಹತ್ ಪ್ರತಿಭಟನೆ ನಡೆಸಬೇಕಾದೀತು ಎಂದು ಎಚ್ಚರಿಸಿದ ಗ್ರಾಮಸ್ಥರ ಒತ್ತಾಯಕ್ಕೆ ಮಣಿದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ತಾತ್ಕಾಲಿಕವಾಗಿ ಮರಳು ತುಂಬಿದ ಗೋಣಿ ಚೀಲಗಳನ್ನು ಅಡ್ಡಯಿಟ್ಟು, ರಸ್ತೆಗೆ ನೀರು ಹರಿಯದಂತೆ ನೋಡುತ್ತೇವೆ. ಆದರೆ ನೀರು ಖಾಲಿಯಾದ ನಂತರವಷ್ಟೇ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.







