ಜು.1: ಶಾರದಾ ಆಯುರ್ವೇದ ಆಸ್ಪತ್ರೆ ಲೋಕಾರ್ಪಣೆ
ಮಂಗಳೂರು, ಜೂ.27: ತಲಪಾಡಿಯ ದೇವಿನಗರದ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನ ಎದುರಿನ ಶಾರದಾ ಆಯುರ್ವೇದ ಆಸ್ಪತ್ರೆ ಜುಲೈ 1ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, 12 ಎಕರೆ ಪ್ರದೇಶದ ಶಾರದಾ ಆಯುರ್ಧಾಮ ಕ್ಯಾಂಪಸ್‌ನಲ್ಲಿ ಆಯುರ್ವೇದ ಆಸ್ಪತ್ರೆ ಆರಂಭಗೊಂಡಿದೆ. ಮೂಲಭೂತ ಸೌಕರ್ಯಗಳೊಂದಿಗೆ ವೈಫೈ, ಎಸಿ ಕೊಠಡಿ ಹಾಗೂ ನಾನಾ ಸ್ತರದ ವಾರ್ಡ್ ಹಾಗೂ ಕೊಠಡಿ ಸೌಲಭ್ಯಗಳನ್ನು ಹೊಂದಿರುವ ಆಸ್ಪತ್ರೆಯು 100 ಹಾಸಿಗೆಗಳಿಂದ ಕೂಡಿದೆ ಎಂದರು.
ಕೇಂದ್ರ ಸರಕಾರದ ಆಯುಷ್ ಸಚಿವರಾದ ಶ್ರೀಪಾದ ಎಸ್ಸೋ ನಾಯಕ್ ಬೆಳಗ್ಗೆ ಸಂಜೆ 3.30ಕ್ಕೆ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಜೀವ್‌ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸಾಯನ್ಸ್‌ನ ಉಪ ಕುಲಪತಿ ಡಾ. ಸಚ್ಚಿದಾನಂದ, ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್‌ನ ಅಧ್ಯಕ್ಷ ಡಾ. ಬಿ.ಆರ್. ರಾಮಕೃಷ್ಣ, ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಭಾಗವಹಿಸಲಿರುವರು. ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ, ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಆಸ್ಪತ್ರೆಯು ಹೊರರೋಗಿ ವಿಭಾಗದಲ್ಲಿ ಕಾರ್ಯ ಚಿಕಿತ್ಸೆ, ಪಂಚಕರ್ಮ ಚಿಕಿತ್ಸೆ, ಶಲ್ಯ ತಂತ್ರ, ಪ್ರಸೂತಿ ಹಾಗೂ ಸ್ತ್ರೀ ರೋಗ, ಕುಮಾರಬ್ರುತ್ಯ, ವಾಗೀಕರಣ, ಫಿಸಿಯೋಥೆರಪಿ, ಸ್ವಸ್ಥಮೃತ ಹಾಗೂ ಯೋಗ ವಿಭಾಗಗಳನ್ನು ಒಳಗೊಂಡಿದೆ. ತಜ್ಞ ವೈದ್ಯರಿಂದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುವುದು. ಹೊರ ಹಾಗೂ ಒಳ ರೋಗಿಗಳ ತಪಾಸಣೆಗೆ ಅತ್ಯಾಧುನಿಕ ಪರೀಕ್ಷಾ ಉಪಕರಣಗಳು ಹಾಗೂ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಎಕ್ಸ್‌ರೇ, ಸ್ಕಾನಿಂಗ್, ದಂತ ಚಿಕಿತ್ಸೆ, ಲ್ಯಾಬೋರೇಟರಿ, ಹೆರಿಗೆ ವಿಭಾಗ, ತುರ್ತು ಚಿಕಿತ್ಸಾ ವಿಭಾಗ, ಸುಸಜ್ಜಿತ ಶಸ್ತ್ರ ಚಿಕಿತ್ಸಾ ಕೊಠಡಿಗಳನ್ನು ಆಸ್ಪತ್ರೆ ಹೊಂದಿದೆ ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಕೆ.ಎಸ್. ಕಲ್ಲೂರಾಯ, ಪ್ರದೀಪ್ ಕುಮಾರ್ ಕಲ್ಕೂರ, ವಿವೇಕ್ ತಂತ್ರಿ, ಡಾ. ರವಿ ಗಣೇಶ್ ಉಪಸ್ಥಿತರಿದ್ದರು.







