ಮಂಗಳೂರಿಗೆ ಡೋಪ್ಲರ್ ರಾಡರ್
ಮಂಗಳೂರು, ಜೂ. 27: ಮಂಗಳೂರಿನ ಶಕ್ತಿನಗರದಲ್ಲಿ ಹವಾಮಾನದ ಬಗ್ಗೆ ನಿಖರ ಮಾಹಿತಿ ನೀಡುವ ಆಧುನಿಕ ಉಪಕರಣ ಡೋಪ್ಲರ್ ರಾಡರ್ ಅಳವಡಿಕೆಯಾಗಲಿದೆ ಎಂದು ಹವಾಮಾನ ತಜ್ಞ ಹಾಗೂ ಮಂಗಳೂರು ಹವಾಮಾನ ಕೇಂದ್ರದ ಮುಖ್ಯಸ್ಥರಾದ ಆರ್.ಜೆ.ವಝ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅವರು ಇಂದು ಮೀನುಗಾರಿಕಾ ಕಾಲೇಜಿನಲ್ಲಿ ಹವಾಮಾನ ಇಲಾಖೆಯ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದ ಸಂದರ್ಭದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಪ್ರಸಕ್ತ ಈ ರೀತಿಯ ಯಂತ್ರ ಮುಂಬೈಯಲ್ಲಿದೆ ಶೀಘ್ರದಲ್ಲಿ ಕೊಚ್ಚಿಯಲ್ಲಿ ಹಾಗೂ ಮಂಗಳೂರಿನಲ್ಲಿ ಈ ರೀತಿಯ ರಾಡರ್ ಅಳವಡಿಕೆಯಾಗಿದೆ. ಈ ರೀತಿಯ ಯಂತ್ರದ ಅಳವಡಿಕೆಯಿಂದ ಗಾಳಿಯ ಚಲನೆಯ ದಿಕ್ಕು, ವೇಗ ಚಂಡ ಮಾರುತದ ಮುನ್ಸೂಚನೆ, ಮಳೆಯ ಸೂಚನೆ, ಉಷ್ಣಾಂಶ, ತೇವಾಂಶ, ಸೂರ್ಯ ಕಿರಣದ ಪ್ರಕರತೆ ಮತ್ತು ಹವಾಮಾನ ಇಲಾಖೆಯ ಮಾಹಿತಿಗಳು ನಿಖರವಾಗಿ ಪಡೆಯಲು ಸಾಧ್ಯವಿದೆ ಎಂದು ಅವರು ತಿಳಿಸಿದ್ದಾರೆ.
ನವ ಮಂಗಳೂರು ಬಂದರು ಮತ್ತು ಬಜ್ಪೆಯಲ್ಲಿ ರಾಜ್ಯ ಹವಾಮಾನ ಇಲಾಖೆಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಮುಂದಿನ ಹಂತದಲ್ಲಿ ಪಣಂಬೂರಿನ ಕೇಂದ್ರ ಶಕ್ತಿನಗರಕ್ಕೆ ಸ್ಥಳಾಂತರ ಗೊಂಡು ಡೋಪ್ಲರ್ ರಾಡರ್ ಕಾರ್ಯನಿರ್ವಹಿಸಲಿದೆ. ಹವಾಮಾನ ಇಲಾಖೆಯ ಮುನ್ಸೂಚನೆಗಳು ಹಡಗು, ವಿಮಾನ ಸಂಚಾರ ಹಾಗೂ ಮೀನುಗಾರರಿಗೆ ಸಮುದ್ರದ ಪರಿಸ್ಥಿತಿ ತಿಳಿಯಲು ಅನುಕೂಲವಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಮಂಗಳೂರಿನ ಮೀನುಗಾರಿಕಾ ಕಾಲೇಜಿನಲ್ಲಿ 1946ರಲ್ಲಿ ಸ್ಥಾಪನೆಯಾಗಿದ್ದ ಹವಾಮಾನ ವೀಕ್ಷಣಾಲಯ ಸ್ಥಗಿತಗೊಂಡಿದೆ.ಈ ಹವಾಮಾನ ವೀಕ್ಷಣಾಲಯ ಕಾರ್ಯನಿರ್ವಹಿಸದೆ 13 ವರ್ಷ ಕಳೆದಿದೆ ಅದನ್ನು ಸರಿಪಡಿಸಲು ರಾಜ್ಯ ಹವಾಮಾನ ಇಲಾಖೆಯ ಅಧಿಕಾರಿಗಳಿಗೆ ಮೀನುಗಾರಿಕಾ ಕಾಲೇಜಿನ ಕೃಷಿ ವಿಭಾಗದ ವತಿಯಿಂದ ಇಂದು ಮನವಿ ಮಾಡಿದ್ದಾರೆ.







