ಚಿಕ್ಕಮಗಳೂರು: ಮಳೆಹಾನಿ ಪ್ರದೇಶಗಳಲ್ಲಿ ಕೈಗೊಂಡ ಪುನಃರ್ವಸತಿ, ಪರಿಹಾರ ಕ್ರಮಗಳ ಕುರಿತ ಅಧಿಕಾರಿಗಳ ಸಭೆ
ಮಳೆಹಾನಿ ಸಮೀಕ್ಷೆ ಮತ್ತೊಮ್ಮೆ ನಡೆಸಲು ಸಚಿವ ದೇಶಪಾಂಡೆ ಸೂಚನೆ

ಚಿಕ್ಕಮಗಳೂರು, ಜೂ.27: ಜಿಲ್ಲಾದ್ಯಂತ ಮಳೆಯಿಂದ ಆದ ಹಾನಿಯ ಬಗ್ಗೆ ಜಿಲ್ಲಾಡಳಿತ ವರದಿ ಸಿದ್ಧಪಡಿಸಿ ಈಗಾಗಲೆ ಸರಕಾರಕ್ಕೆ ವರದಿ ಸಲ್ಲಿಸಿದೆ. ಆದರೆ ಕೆಲವೆಡೆ ಮಳೆಹಾನಿ ಸಮೀಕ್ಷೆ ಬಗ್ಗೆ ರೈತರು, ರಾಜಕೀಯ ಪಕ್ಷಗಳ ಮುಖಂಡರಿಂದ ಅಸಮಾದಾನ ವ್ಯಕ್ತವಾಗಿದೆ. ಆದ್ದರಿಂದ ಮಳೆಯಿಂದ ಹಾನಿಯಾದ ಯಾವುದೇ ಸಾರ್ವಜನಿಕರಿಗೆ ಅನ್ಯಾಯವಾಗಬಾರದು. ಆ ದೃಷ್ಟಿಯಿಂದ ಮತ್ತೊಮ್ಮೆ ಕಂದಾಯ ಇಲಾಖೆಯ ಅಧಿಕಾರಿಗಳು ಸಮೀಕ್ಷೆ ನಡೆಸಿ ತಕ್ಷಣ ಪರಿಹಾರ ನೀಡುವಂತೆ ಕಂದಾಯ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಆರ್.ವಿ.ದೇಶಪಾಂಡೆ ಅವರು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯರವರಿಗೆ ಸೂಚಿಸಿದರು.
ಬುಧವಾರ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಸಚಿವ ಆರ್.ವಿ.ದೇಶಪಾಂಡೆ ಅಧ್ಯಕ್ಷತೆಯಲ್ಲಿ ನಡೆದ ಮಳೆಹಾನಿ ಪ್ರದೇಶಗಳಲ್ಲಿ ಕೈಗೊಂಡ ಪುನಃರ್ವಸತಿ ಹಾಗೂ ಪರಿಹಾರ ಕ್ರಮಗಳ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಲೆನಾಡಿನಲ್ಲಿ ಈ ಬಾರಿ ಭಾರೀ ಮಳೆಯಾಗಿದೆ. ಅಷ್ಟೇ ಪ್ರಮಾಣದಲ್ಲಿ ಆಸ್ತಿಪಾಸ್ತಿ ನಷ್ಟ, ಜೀವ ಹಾನಿಯೂ ಆಗಿದೆ. ಜಿಲ್ಲಾಡಳಿತ ಈ ಸಂಬಂಧ ವರದಿಯನ್ನು ಸರಕಾರಕ್ಕೆ ರವಾನಿಸಿದ್ದರಾದರೂ ಈ ವರದಿ ಬಗ್ಗೆ ಜಿಲ್ಲೆಯ ಸಾರ್ವಜನಿಕರು, ರಾಜಕೀಯ ಮುಖಂಡರು, ರೈತರು ಅಸಮಾದಾನಗೊಂಡಿದ್ದಾರೆ. ಸಮೀಕ್ಷೆ ಪರಿಪೂರ್ಣವಾಗಿಲ್ಲ ಎಂದು ದೂರಿದ್ದಾರೆ. ಈ ಕಾರಣಕ್ಕೆ ಮತ್ತೊಮ್ಮೆ ಸಮಗ್ರ ವರದಿ ತಯಾರಿಸಿ ಸರಕಾರಕ್ಕೆ ಕಳುಹಿಸಬೇಕೆಂದು ಅವರು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.158 ರಷ್ಟು ಹೆಚ್ಚುವರಿ ಮಳೆಯಾಗಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ ಶೇ.154, ಮೂಡಿಗೆರೆ ಶೇ.151, ಶೃಂಗೇರಿ ಶೇ.129, ಕೊಪ್ಪ ಶೇ.168, ಎನ್.ಆರ್.ಪುರ ಶೇ.180, ಕಡೂರು ಶೇ.169 ಹಾಗೂ ತರೀಕೆರೆ ತಾಲೂಕಿನಲ್ಲಿ ಶೇ.187 ರಷ್ಟು ಮಳೆಯಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಮೇ, ಜೂನ್ ತಿಂಗಳಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆಯಿಂದ ಎಲ್ಲ ಕೆರೆಕಟ್ಟೆಗಳು ತುಂಬಿವೆ ಎಂದು ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಸಭೆಗೆ ತಿಳಿಸಿದಾಗ ಜನಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿ, ಇತ್ತೀಚೆಗೆ ಸುರಿದ ಮಳೆಯಿಂದ ಕೆರೆಕಟ್ಟೆಗಳು ಸಂಪೂರ್ಣವಾಗಿ ತುಂಬಿಲ್ಲ, ಭೂಮಿ ಉಳುಮೆಗೆ ಯೋಗ್ಯವಾಗಿದೆ ಅಷ್ಟೇ ಎಂದರು.
ಶಾಸಕ ಸಿ.ಟಿ.ರವಿ ಮಾತನಾಡಿ, ಮಲೆನಾಡಿನಲ್ಲಿ ಉತ್ತಮ ಮಳೆಯಾಗಿದೆ. ಮಳೆಯ ನೀರು ನದಿ ಸೇರಿದೆ. ಚಿಕ್ಕಮಗಳೂರು ತಾಲೂಕಿನ ಒಂದು ಹೋಬಳಿಯಲ್ಲಿ ಮಾತ್ರ ಉತ್ತಮ ಮಳೆಯಾಗಿದೆ. ಕಡೂರು, ತರೀಕೆರೆ ಭಾಗದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾದರೂ ಕೆರೆಕಟ್ಟೆಗಳು ತುಂಬಿಲ್ಲ ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸೀತಾ ಮಾತನಾಡಿ, ಜಿಲ್ಲೆಯಲ್ಲಿ 1,50,560 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ಈವರೆಗೂ 34,248 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಶೇ.23ರಷ್ಟು ಪ್ರಗತಿಯಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ವಿಧಾನಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಉತ್ತಮ ಮಳೆಯಾದರೂ ಬಿತ್ತನೆ ಕಡಿಮೆಯಾಗಿದೆ. ಬಿತ್ತನೆಯಲ್ಲಿ ಶೇ. ಪ್ರಮಾಣದಲ್ಲಿ ಕಡಿಮೆಯಾಗಲು ಕಾರಣವೇನು ಎಂದು ಪ್ರಶ್ನಿಸಿದ ಅವರು, ಕೃಷಿ ಅಧಿಕಾರಿಗಳು ಬಿತ್ತನೆ ಬೀಜ ಹಾಗೂ ರಸಗೊಬ್ಬ ನೀಡುವ ಕುರಿತು ಮಾಹಿತಿ ರೈತರಿಗೆ ಸರಿಯಾಗಿ ತಲುಪುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸೀತಾ ಮಾತನಾಡಿ, ಭತ್ತ ಮತ್ತು ರಾಗಿ ಬಿತ್ತನೆ ಇನ್ನೂ ಆರಂಭವಾಗಿಲ್ಲ. ಇದು ಜುಲೈ ಅಂತ್ಯದಲ್ಲಿ ಆರಂಭವಾಗುತ್ತದೆ. ಆಗ ಪ್ರಗತಿ ಉತ್ತಮವಾಗುತ್ತದೆ ಎಂದು ತಿಳಿಸಿದರು. ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಮಾತನಾಡಿ, ಮಳೆಯಿಂದಾಗಿ ತೋಟಗಾರಿಕಾ ಬೆಳೆಗಳಾದ ಅಡಕೆ ಮತ್ತು ಬಾಳೆಗೆ ಹಾನಿಯಾಗಿದೆ. ಈ ಎನ್.ಆರ್.ಪುರ ತಾಲೂಕಿನಲ್ಲಿ 5.22 ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿತ್ತು. ಅದಕ್ಕೆ 26 ಸಾವಿರ ರೂ. ಪರಿಹಾರ ವಿತರಿಸಲಾಗಿದೆ. ಮೂಡಿಗೆರೆ ತಾಲೂಕಿನಲ್ಲಿ 4 ಎಕರೆ ಪ್ರದೇಶದಲ್ಲಿ ಬೆಳೆಹಾನಿಯಾಗಿದ್ದು, 54 ಸಾವಿರ, ಶೃಂಗೇರಿ 6,800, ಕೊಪ್ಪ 354 ಸಾವಿರ ಸೇರಿ ಒಟ್ಟಾರೆ 11.32 ಎಕರೆ ಪ್ರದೇಶದಲ್ಲಿ 1.21 ಲಕ್ಷ ರು. ಬೆಳೆ ಹಾನಿಯಾಗಿದೆ. ಎನ್.ಆರ್.ಪುರ ತಾಲೂಕು ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿ ಸಮೀಕ್ಷೆ ಮಾಡಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಬಸರಿಕಟ್ಟೆಯ ವಿದ್ಯಾರ್ಥಿನಿಲಯದ ಕಾಂಪೌಂಡ್ ಮಳೆಯಿಂದಾಗಿ ಬಿದ್ದು ಹೋಗಿದೆ ಎಂದು ಜಿಲ್ಲಾಧಿಕಾರಿ ಸಭೆಗೆ ತಿಳಿಸಿದಾಗ ಶಾಸಕ ಟಿ.ಡಿ.ರಾಜೇಗೌಡ ಪ್ರತಿಕ್ರಿಯಿಸಿ, ಕಾಂಪೌಂಡ್ ಬೀಳಲು ಮಳೆ ಕಾರಣವಲ್ಲ. ಕಳಪೆ ಕಾಮಗಾರಿಯಿಂದಾಗಿ ಬಿದ್ದು ಹೋಗಿದೆ. 54 ಲಕ್ಷ ರೂ. ವೆಚ್ಚದಲ್ಲಿ ಮಾಡಲಾದ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದೆ. ಇದಕ್ಕೆ ಮಳೆಹಾನಿಯ ಪರಿಹಾರ ನೀಡಬಾರದು ಎಂದರು.
ಕಳಪೆ ಕಾಮಗಾರಿಯಾಗಿರುವ ಹಿನ್ನೆಲೆಯಲ್ಲಿ ನಿರ್ಮಿತಿ ಕೇಂದ್ರದವರೇ ತಮ್ಮ ಸ್ವಂಚ ಹಣದಲ್ಲಿ ಪುನಃ ನಿರ್ಮಿಸಿಕೊಡುವುದಾಗಿ ಹೇಳಿದ್ದಾರೆ ಎಂದು ಜಿ.ಪಂ. ಸಿಇಒ ತಿಳಿಸಿದಾಗ, ಸಚಿವರು ಮಧ್ಯೆ ಪ್ರವೇಶಿಸಿ ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರರಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತಕೃಷ್ಣಪ್ಪ, ಉಪಾಧ್ಯಕ್ಷ ಆನಂದಪ್ಪ, ಜಿ.ಪಂ. ಸಿ.ಇ.ಓ. ಸತ್ಯಭಾಮ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆಗೆ ಜಿಲ್ಲಾದ್ಯಂತ 24.19 ಕೋಟಿ ರೂ. ನಷ್ಟ ಉಂಟಾಗಿದೆ. 26 ಮನೆ, 8 ಜಾನುವಾರು, ಗ್ರಾಮೀಣಾಭಿವೃದ್ಧಿ ಇಲಾಖೆಯ ರಸ್ತೆ, ಸೇತುವೆ, ಸರಕಾರಿ ಕಟ್ಟಡ, ಕೆರೆಗಳು ಸೇರಿದಂತೆ ಒಟ್ಟಾರೆ 17.80 ಕೋಟಿ ರೂ. ನಷ್ಠವಾಗಿದೆ. ಲೋಕೋಪಯೋಗಿ ಇಲಾಖೆಯ ರಸ್ತೆ, ಸೇತುವೆಗಳಿಗೂ ಹಾನಿಯಾಗಿದ್ದು, 4.36 ಕೋಟಿ ರೂ. ನಷ್ಟವಾಗಿದೆ. ವಿದ್ಯುತ್ ಕಂಬಗಳು, ವಿದ್ಯುತ್ ಲೈನ್, ಟ್ರಾನ್ಸ್‍ಫಾರ್ಮರ್ ಹಾನಿ ಸೇರಿದಂತೆ ಮೆಸ್ಕಾಂಗೆ 2.11 ಕೋಟಿ ರೂ. ನಷ್ಟವಾಗಿದೆ.
- ಆರ್.ವಿ.ದೇಶಪಾಂಡೆ, ಸಚಿವ







