ಬೆಂಗಳೂರು: ನಕಲಿ ಐಜಿಪಿ ಬಂಧನ

ಬೆಂಗಳೂರು, ಜೂ.27: ಸರಕಾರಿ ವೈದ್ಯರು, ಅಧಿಕಾರಿಗಳನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ಆರೋಪದ ಮೇಲೆ ನಕಲಿ ಐಜಿಪಿಯೊಬ್ಬನನ್ನು ಜಯನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನಗರದ ನಿವಾಸಿ ರಾಮನಂದ ಸಾಗರ್ ಬಂಧಿತ ಆರೋಪಿ ಎಂದು ತಿಳಿದುಬಂದಿದೆ.
ಜಯನಗರದ ಸರಕಾರಿ ಆಸ್ಪತ್ರೆಯ ಅಧಿಕಾರಿಗಳು ಮತ್ತು ವೈದ್ಯರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದಲ್ಲದೆ, ಆಸ್ಪತ್ರೆಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದನು ಎನ್ನಲಾಗಿದೆ. ಆರೋಪಿ ರಾಮನಂದಸಾಗರ್ ವಿರುದ್ಧ ನಗರ ಪೊಲೀಸ್ ಆಯುಕ್ತ ಮತ್ತು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿತ್ತು. ಈ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದ ಜಯನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಸಂಘಟನೆ: ತಾನೊಬ್ಬ ಐಜಿಪಿ ಎಂದು ಹೇಳಿಕೊಳ್ಳುತ್ತಿದ್ದ ರಾಮನಂದಸಾಗರ್, ಸುಲಿಗೆ ಮಾಡಲೆಂದೇ ಒಂದು ಸಂಘಟನೆ ಕಟ್ಟಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಭಾರತ್ ಯುವಸೇನೆ ಹೆಸರಿನ ಸಂಘಟನೆ ಮಾಡಿಕೊಂಡು ಆ ಮೂಲಕ ಸರಕಾರಿ ಅಧಿಕಾರಿಗಳು ಮತ್ತು ಸಾರ್ವಜನಿಕರನ್ನು ಈತ ಬೆದರಿಸುತ್ತಿದ್ದ ಎಂದು ತಿಳಿದುಬಂದಿದೆ.
ಐಜಿಪಿ ರೀತಿಯ ಫೋಟೋಗಳು, ಪೊಲೀಸರ ಸಭೆಯಲ್ಲಿ ಭಾಷಣ ಮಾಡುತ್ತಿರುವಂತಹ ಫೋಟೋಗಳು, ಪೊಲೀಸ್ ಕಾರ್ಯಕ್ರಮದಲ್ಲಿ ಧ್ವಜ ಹಾರಿಸುವಂತಹ ವಿಡಿಯೋ, ಯುವಕರಿಗೆ ತರಬೇತಿ ನೀಡುವಂತಹ ವಿಡಿಯೊಗಳನ್ನು ಸೃಷ್ಟಿಸಿ ತಾನೊಬ್ಬ ಪೊಲೀಸ್ ಅಧಿಕಾರಿ, ಸಮಾಜ ಬದಲಿಸಲು ಹೊರಟಿರುವ ಹೀರೋ ಎಂದು ಬಿಂಬಿಸಿಕೊಂಡು ಆ ಮೂಲಕ ವಂಚನೆ ನಡೆಸುತ್ತಿದ್ದ ಎನ್ನುವ ಮಾಹಿತಿ ತನಿಖೆ ವೇಳೆ ಬೆಳಕಿಗೆ ಬಂದಿದೆ.







