ಕಮಿಷನ್ ಹೆಚ್ಚಳಕ್ಕೆ ಪಡಿತರ ವಿತರಕರ ಆಗ್ರಹ
ಬೆಂಗಳೂರು, ಜೂ.27: ಪಡಿತರ ವಿತರಕರಿಗೆ ಪ್ರತಿ ಕ್ವಿಂಟಾಲ್‌ಗೆ 150 ರೂ. ಕಮಿಷನ್ ನೀಡಬೇಕು ಹಾಗೂ ಬಯೋಮೆಟ್ರಿಕ್ ಪದ್ಧತಿಯನ್ನು ರದ್ದು ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕರ್ನಾಟಕ ರಾಜ್ಯ ಸರಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘ ಆಗ್ರಹಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಡಿ.ಜಿ.ಶಿವಾನಂದಪ್ಪ, ರಾಜ್ಯ ಸರಕಾರದಿಂದ ಪರವಾನಿಗೆ ಪಡೆದುಕೊಂಡು ಸುಮಾರು 30-40 ವರ್ಷಗಳಿಂದ ಸಾರ್ವಜನಿಕ ಸೇವೆಯನ್ನು ಮಾಡಲಾಗುತ್ತಿದೆ. ಆದರೆ, ಸರಕಾರದಿಂದ ನಮಗೆ ನ್ಯಾಯಯುತವಾಗಿ ಸಿಗಬೇಕಾದದ್ದು ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸರಕಾರದಿಂದ ವಿತರಕರಿಗೆ ಪ್ರತಿ ಕ್ವಿಂಟಾಲ್‌ಗೆ 87 ರೂ.ಗಳು ನೀಡಲಾಗುತ್ತಿದೆ. ಆದರೆ, ನೆರೆಯ ರಾಜ್ಯವಾದ ಮಹಾರಾಷ್ಟ್ರದಲ್ಲಿ ಪ್ರತಿ ಕ್ವಿಂಟಾಲ್‌ಗೆ 150 ರೂ.ಗಳನ್ನು ನೀಡಲಾಗುತ್ತಿದೆ. ಹಿಂದಿನ ಸರಕಾರ ಪ್ರತಿ ಕ್ವಿಂಟಾಲ್‌ಗೆ 100 ರೂ.ಗಳು ನೀಡಲಾಗುತ್ತದೆ ಎಂದು ಬಜೆಟ್‌ನಲ್ಲಿ ಭರವಸೆ ನೀಡಲಾಗಿತ್ತು. ಇದುವರೆಗೂ ಅದನ್ನು ಈಡೇರಿಸಿಲ್ಲ. ಅಲ್ಲದೆ, ಕಳೆದ ಎರಡು ವರ್ಷಗಳಿಂದ ತೊಗರಿಬೇಳೆ ದಾಸ್ತಾನಿನಲ್ಲಿ ಇತ್ತೀಚಿಗೆ ಕಳಪೆ ಗುಣಮಟ್ಟದ ದಾಸ್ತಾನು ಬರುತ್ತಿದೆ ಎಂದು ಹೇಳಿದರು.
ರಾಜ್ಯ ಸರಕಾರದ ಪಾರದರ್ಶಕತೆ ಕಾಪಾಡುವ ಸಲುವಾಗಿ ಬಯೋಮೆಟ್ರಿಕ್ ಯೋಜನೆ ಜಾರಿ ಮಾಡಿರುವುದು ಸ್ವಾಗತಾರ್ಹ. ಆದರೆ, ವಯಸ್ಸಾದವರಿಂದ ಕೈ ಸವೆದು ಹೋಗಿದ್ದು, ಗುರುತು ಪಡೆಯಲು ಸಾಧ್ಯವಾಗುತ್ತಿಲ್ಲ. ಆದುದರಿಂದಾಗಿ, ಹಾಲಿಯಿರುವ ಶೇ.2 ರಷ್ಟು ವಿನಾಯತಿಯನ್ನು ಶೇ.10ಕ್ಕೆ ಏರಿಕೆ ಮಾಡಬೇಕು. ಎಲ್ಲ ಹಂತದಲ್ಲಿಯೂ ಆಧಾರ್ ಕಡ್ಡಾಯ ಮಾಡಿದ್ದರಿಂದ ದುರುಪಯೋಗ ಸಾಧ್ಯವಿಲ್ಲ. ಹೀಗಾಗಿ, ಜಾಗೃತ ಸಮಿತಿಯನ್ನು ತೆಗೆದು ಹಾಕಬೇಕು. ಪ್ರತಿಯೊಂದು ಕುಟುಂಬಕ್ಕೂ ಕನಿಷ್ಠ 1ಲೀಟರ್ ಸೀಮೆಎಣ್ಣೆ ವಿತರಣೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅವರು ಒತ್ತಾಯಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಬಿ.ರಾಜು ಮಾತನಾಡಿ, ಪ್ರತಿ ಪಡಿತರ ಕಾರ್ಡುದಾರರಿಗೆ ತೊಗರಿ ಬೇಳೆಯ ಬದಲು ಹಳೆಯ ಪದ್ಧತಿಯಂತೆ ಸಕ್ಕರೆ, ತಾಳೆಎಣ್ಣೆ, ಉಪ್ಪು, ಹೆಸರುಕಾಳುಗಳನ್ನು ನೀಡಬೇಕು. ಸಾಗಾಣಿಕೆಯನ್ನು ಟೆಂಡರ್ ದಾರರಿಗೆ ನೀಡುವ ಬದಲು ನಮಗೇ ನೀಡಿದರೆ ಸರಕಾರದ ಹಣ ಉಳಿತಾಯವಾಗುತ್ತದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯಾಧ್ಯಕ್ಷ ಕೃಷ್ಣ ಡಿ.ನಾಯಕ್, ಸಂಘಟನಾ ಕಾರ್ಯದರ್ಶಿ ಕೆ.ಆರ್.ವೆಂಕಟೇಶ್ ಉಪಸ್ಥಿತರಿದ್ದರು.







