ಮಂಗಳೂರು: ಕೆಂಪೇಗೌಡ ದಿನಾಚರಣೆ

ಮಂಗಳೂರು, ಜೂ.27: ಬೆಂಗಳೂರು ಇಂದು ಹೆಮ್ಮೆಯ ನಗರವಾಗಿ ಬೆಳೆದು ನಿಂತಿದ್ದರೆ ಅದರ ಹಿಂದೆ ನಾಡಪ್ರಭು ಕೆಂಪೇಗೌಡರ ಅವಿರತ ಶ್ರಮವಿದೆ. ದೂರದೃಷ್ಟಿಯುಳ್ಳ ಇಂತಹ ನಾಯಕರ ಸಾಧನೆಯನ್ನು ಸಮಾಜ ಎಂದಿಗೂ ಮರೆಯಬಾರದು ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಹೇಳಿದರು.
ದ.ಕ.ಜಿಲ್ಲಾಡಳಿತ, ದ.ಕ.ಜಿಪಂ, ಕನ್ನಡ ಮತು ಸಂಸ್ಕೃತಿ ಇಲಾಖೆ ಹಾಗೂ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ ಮಂಗಳೂರು ಇದರ ಆಶ್ರಯದಲ್ಲಿ ಬುಧವಾರ ನಗರದ ಉರ್ವ ಕೆನರಾ ಹೈಸ್ಕೂಲ್ ಸಭಾಂಗಣದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ಬೆಂಗಳೂರು ನಗರದ ನಿರ್ಮಾತೃವಾದ ಕೆಂಪೇಗೌಡರು ಮುಂದಾಲೋಚನೆಯೊಂದಿಗೆ ಸುಂದರ ನಗರದ ನಿರ್ಮಾಣದ ಕನಸು ಕಂಡು ಅದನ್ನು ಸಾಕಾರಗೊಳಿಸಿದ್ದರು. ಅವರ ಹೆಸರಿನಲ್ಲಿ ಜಯಂತಿಯನ್ನು ಆಚರಿಸುತ್ತಿರುವುದು ಅರ್ಥವತ್ತಾಗಿದೆ ಎಂದರು.
ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪನ್ಯಾಸಕಿ ಸುಧಾರಾಣಿ ಕಿನ್ನಿಗೋಳಿ ಕೆಂಪೇಗೌಡರ ಕುರಿತು ಉಪನ್ಯಾಸ ನೀಡಿದರು.
ಕಾರ್ಪೊರೇಟರ್ ಜಯಂತಿ ಆಚಾರ್, ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಅಧ್ಯಕ್ಷ ಯು.ಬಿ.ಎಸ್.ಸುಕುಮಾರ್, ಉಪಾಧ್ಯಕ್ಷ ಪಿ.ಎಚ್.ಆನಂದ್, ಶಿಕ್ಷಕರಾದ ಮೋಹನ್ ಕುಮಾರ್ ಪೆರ್ಮುದೆ, ಲಕ್ಷ್ಮೀ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿದರು.







