ಸಾಮಾಜಿಕ ಭದ್ರತೆ ಯೋಜನೆ 50 ಕೋಟಿ ಜನರಿಗೆ ವಿಸ್ತರಣೆ: ಪ್ರಧಾನಿ ಮೋದಿ

ಹೊಸದಿಲ್ಲಿ, ಜೂ.27: ಸಾಮಾಜಿಕ ಭದ್ರತಾ ಯೋಜನೆಯನ್ನು ದೇಶದ 50 ಕೋಟಿ ಜನರಿಗೆ ವಿಸ್ತರಿಸಲಾಗಿದೆ, ಇದು 2014ರಿಂದ ಹತ್ತು ಪಟ್ಟು ಹೆಚ್ಚಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ತಿಳಿಸಿದ್ದಾರೆ.
ಸರಕಾರದ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳ ಜೊತೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಮಾಲೋಚನೆ ನಡೆಸಿದ ಪ್ರಧಾನಿ ಮೋದಿ, ಸರಕಾರದ ಸಾಮಾಜಿಕ ಭದ್ರತೆ ಯೋಜನೆಯು ಜೀವನದ ಅನಿಶ್ಚಿತತೆಗಳ ಜೊತೆ ಹೋರಾಡಲು ನೆರವಾಗುತ್ತದೆ ಎಂದು ತಿಳಿಸಿದ್ದಾರೆ. 2014ರಲ್ಲಿ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನ ಪಡೆದವರ ಸಂಖ್ಯೆ ಐದು ಕೋಟಿಯಿತ್ತು. ಈಗ ಅದು ಐವತ್ತು ಕೋಟಿಗೆ ತಲುಪಿದೆ ಎಂದು ಮೋದಿ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಜನ ಧನ ಯೋಜನೆಯ ಮೂರು ಪ್ರಮುಖ ಉದ್ದೇಶಗಳೆಂದರೆ, ಬಡವರಿಗೆ ಬ್ಯಾಂಕ್‌ಗಳ ಬಾಗಿಲುಗಳನ್ನು ತೆರೆಯುವುದು, ಸಣ್ಣ ವ್ಯವಹಾರಸ್ಥರು ಹಾಗೂ ಉದ್ಯೋನ್ಮುಖ ಉದ್ಯಮಿಗಳಿಗೆ ಬಂಡವಾಳ ಒದಗುವಂತೆ ಮಾಡುವುದು ಹಾಗೂ ಬಡ ಜನರಿಗೆ ಸಾಮಾಜಿಕ ಭದ್ರತೆ ಸಿಗುವಂತೆ ಮಾಡುವುದು ಎಂದು ಪ್ರಧಾನಿ ತಿಳಿಸಿದ್ದಾರೆ. ಜನ ಧನ ಯೋಜನೆಯಡಿ 28 ಕೋಟಿ ಹೊಸ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ ಎಂದು ತಿಳಿಸಿದ ಮೋದಿ, ಈ ಪೈಕಿ ಮಹಿಳೆಯರೇ ಹೆಚ್ಚು ಬ್ಯಾಂಕ್ ಖಾತೆಗಳನ್ನು ತೆರೆದಿದ್ದಾರೆ ಎಂಬುದೇ ನನಗೆ ಖುಷಿ ನೀಡಿದೆ. ಮಹಿಳೆಯರು ಆರ್ಥಿಕ ಮುಖ್ಯವಾಹಿನಿಯಲ್ಲಿರಬೇಕಾಗಿರುವುದು ಮುಖ್ಯ ಎಂದು ಅಭಿಪ್ರಾಯಿಸಿದ್ದಾರೆ. ಸರಕಾರವು ಪ್ರಧಾನ ಮಂತ್ರಿ ಜೀವನ್‌ಜ್ಯೋತಿ ವಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಹಾಗೂ ಅಟಲ್ ಪಿಂಚಣಿ ಯೋಜನೆಯನ್ನು ಹೆಚ್ಚು ಜನಪ್ರಿಯಗೊಳಿಸುತ್ತಿದೆ.
ನಿಶ್ಚಿತ ಕನಿಷ್ಟ ಪಿಂಚಣಿ ಯೋಜನೆಯಾ ಅಟಲ್ ಪಿಂಚಣಿ ಯೋಜನೆಯಲ್ಲಿ ಒಂದು ಕೋಟಿ ಮಂದಿ ತಮ್ಮ ಖಾತೆಗಳನ್ನು ತೆರೆದಿದ್ದಾರೆ. 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಿಗಾಗಿ ಸರಕಾರ ಪ್ರಧಾನ ಮಂತ್ರಿ ವಯ ವಂದನಾ ಯೋಜನೆಯನ್ನು ಪರಿಚಯಿಸಿದೆ. ಈವರೆಗೆ ಈ ಯೋಜನೆಯಡಿ ಮೂರು ಲಕ್ಷ ಜನರು ಲಾಭವನ್ನು ಪಡೆದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.







