ಇರಾನ್ ತೈಲ ಆಮದು ಶೂನ್ಯಕ್ಕೆ : ಭಾರತ ಸೇರಿದಂತೆ ಜಾಗತಿಕ ಸಮುದಾಯಕ್ಕೆ ಅಮೆರಿಕ ತಾಕೀತು
ನವೆಂಬರ್ 4ರಂದು ಆರ್ಥಿಕ ದಿಗ್ಬಂಧನ ಜಾರಿಗೆ
ವಾಶಿಂಗ್ಟನ್, ಜೂ. 27: ಇರಾನ್ ವಿರುದ್ಧ ವಿಧಿಸಲಾಗಿರುವ ಆರ್ಥಿಕ ದಿಗ್ಬಂಧನಗಳು ನವೆಂಬರ್ 4ರಿಂದ ಜಾರಿಗೆ ಬರಲಿದ್ದು, ಆ ವೇಳೆಗೆ ಭಾರತ ಸೇರಿದಂತೆ ಇರಾನ್‌ನಿಂದ ಕಚ್ಚಾತೈಲ ಆಮದು ಮಾಡುವ ಎಲ್ಲ ದೇಶಗಳು ತಮ್ಮ ಆಮದುಗಳನ್ನು ಶೂನ್ಯಕ್ಕೆ ಇಳಿಸಬೇಕು ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅದೇ ವೇಳೆ, ಹಿಂದಿನಂತೆ ಈ ಬಾರಿ ಯಾರಿಗೂ ರಿಯಾಯಿತಿ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.
ಯುರೋಪ್ ಮತ್ತು ಏಶ್ಯದ ಮಿತ್ರದೇಶಗಳಿಗೆ ಈ ಸಂದೇಶವನ್ನು ಈಗಾಗಲೇ ನೀಡಲಾಗಿದೆ ಹಾಗೂ ವಿದೇಶಾಂಗ ಮತ್ತು ಖಜಾನೆ ಇಲಾಖೆಗಳ ಅಧಿಕಾರಿಗಳ ತಂಡವೊಂದು ಮುಂದಿನ ವಾರಗಳಲ್ಲಿ ಭಾರತ, ಚೀನಾ ಮತ್ತು ಇತರ ದೇಶಗಳಿಗೆ ಭೇಟಿ ನೀಡಲಿದೆ ಎಂದರು.
ದಿಗ್ಬಂಧನ ನಿಯಮಗಳನ್ನು ಉಲ್ಲಂಘಿಸಿದರೆ ಭಾರತ ಮತ್ತು ಚೀನಾಗಳ ವಿರುದ್ಧ ಇತರ ದೇಶಗಳ ವಿರುದ್ಧ ವಿಧಿಸುವ ದಿಗ್ಬಂಧನಗಳನ್ನೇ ವಿಧಿಸಲಾಗುವುದು ಎಂದು ಅವರು ತಿಳಿಸಿದರು.
ವಿನಾಯಿತಿಗಳನ್ನು ನೀಡುವುದಕ್ಕೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘‘ನಾವು ಯಾರಿಗೂ ವಿನಾಯಿತಿಗಳನ್ನು ನೀಡುವುದಿಲ್ಲ’’ ಎಂದರು.
ತೈಲವನ್ನು ತಡೆಯುವುದು ಸುಲಭವಲ್ಲ: ಇರಾನ್
ಇರಾನ್‌ನ ತೈಲವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಹೊರಗಿಡುವುದು ಸುಲಭವಿಲ್ಲ ಹಾಗೂ ಅಮೆರಿಕ ತಾಕೀತು ಮಾಡಿರುವಂತೆ ಕೆಲವೇ ತಿಂಗಳುಗಳ ಅವಧಿಯಲ್ಲಿ ಅದು ಸಾಧ್ಯವಾಗುವುದಿಲ್ಲ ಎಂದು ಇರಾನ್‌ನ ತೈಲ ಕ್ಷೇತ್ರದ ಅಧಿಕಾರಿಯೊಬ್ಬರು ಹೇಳಿದ್ದಾರೆ.
‘‘ಇರಾನ್ ಪ್ರತಿ ದಿನ 25 ಲಕ್ಷ ಬ್ಯಾರಲ್ ಕಚ್ಚಾ ಮತ್ತು ದ್ರವೀಕೃತ ತೈಲವನ್ನು ರಫ್ತು ಮಾಡುತ್ತಿದೆ. ಅದನ್ನು ಸುಲಭವಾಗಿ ಕೆಲವೇ ತಿಂಗಳುಗಳ ಅವಧಿಯಲ್ಲಿ ಹೋಗಲಾಡಿಸುವುದು ಅಸಾಧ್ಯ’’ ಎಂದರು.







