ಉಡುಪಿ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ, ಸದಸ್ಯರ ರಾಜೀನಾಮೆ
ಉಡುಪಿ, ಜೂ.27: ಉಡುಪಿ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರು ಹಾಗೂ ನಾಲ್ವರು ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಬಗ್ಗೆ ವರದಿಯಾಗಿದೆ.
ಮಕ್ಕಳ ಪ್ರಕರಣವೊಂದಕ್ಕೆ ಸಂಬಂಧಿಸಿ ಸಮಿತಿಯೊಂದಿಗೆ ಉದ್ದಟತನದಿಂದ ವರ್ತಿಸಿದ ನಿಟ್ಟೂರು ಬಾಲಕಿಯರ ಬಾಲಮಂದಿರದ ಅಧೀಕ್ಷಕಿ ಹುಲಿಗವ್ವ ಎಸ್.ಜೋಗೇರ್ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿರುವುದರ ವಿರುದ್ಧ ಅಸಮಾಧಾನಗೊಂಡ ಸಮಿತಿಯ ಅಧ್ಯಕ್ಷ ರೋನಾಲ್ಡ್ ಪುರ್ಟಾಡೋ ಹಾಗೂ ಸದಸ್ಯರಾದ ಮುರಳೀಧರ್ ಶೆಟ್ಟಿ, ನಾಗರತ್ನ, ಮೋಹನ್ ಕುಮಾರ್, ಅಖಿಲ್ ಬಿ.ಹೆಗ್ಡೆ ಜೂ.15ರಂದು ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿಯ ಸದಸ್ಯ ಕಾರ್ಯದರ್ಶಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.
2017ರ ನವೆಂಬರ್ ತಿಂಗಳಲ್ಲಿ ಮಕ್ಕಳ ಪ್ರಕರಣಕ್ಕೆ ಸಂಬಂಧಿಸಿ ಸಮಿತಿಯ ಸೂಚನೆಯನ್ನು ಪಾಲಿಸದೆ ಉದ್ದಟತನದಿಂದ ವರ್ತಿಸಿದ ಬಾಲಮಂದಿರದ ಅಧೀಕ್ಷಕಿ ಇಡೀ ಸಮಿತಿಯನ್ನೇ ಬರ್ಖಾಸ್ತುಗೊಳಿಸುವುದಾಗಿ ಹೇಳಿದ್ದರು. ಈ ವಿಚಾರದಲ್ಲಿ ಸಮಿತಿಯು ನ.24ರಂದು ಅಧೀಕ್ಷಕಿಗೆ ಕಾರಣ ಕೇಳಿ ಶೋಕಾಸ್ ನೋಟೀಸ್ ಜಾರಿ ಮಾಡಿತ್ತು.
ನ.28ರಂದು ಇದಕ್ಕೆ ಉತ್ತರಿಸಿದ ಅಧೀಕ್ಷಕಿ, ಸಮಿತಿಯ ವಿರುದ್ಧ ಕಾನೂನು ಸೇವಾ ಪ್ರಾಧಿಕಾರಕ್ಕೂ ದೂರು ನೀಡಿದ್ದರು. ಅಧಿಕಾರದ ವ್ಯಾಪ್ತಿ ಮೀರಿ ವರ್ತಿಸಿದ ಅಧೀಕ್ಷಕಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸಮಿತಿಯು ಡಿಸೆಂಬರ್ ತಿಂಗಳಲ್ಲಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿತ್ತು ಎಂದು ಸಮಿತಿ ಸದಸ್ಯ ಹಾಗೂ ನ್ಯಾಯವಾದಿ ಮುರಳೀಧರ್ ಶೆಟ್ಟಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳು ಈ ಕುರಿತು ಯಾವುದೇ ಕ್ರಮ ತೆಗೆದುಕೊಳ್ಳದಿದ್ದಾಗ ಚುನಾವಣೆಯ ಬಳಿಕ ಅಂದರೆ 2018ರ ಮೇ ಕೊನೆಯ ವಾರದಲ್ಲಿ ಜಿಲ್ಲಾಧಿ ಕಾರಿಗಳಿಗೆ ಜ್ಞಾಪಕ ಪತ್ರವನ್ನು ಸಮಿತಿ ವತಿಯಿಂದ ಕಳುಹಿಸಲಾಯಿತು. ಇದಕ್ಕೂ ಉತ್ತರ ಬಾರದ ಕಾರಣ ಅಸಮಾಧಾನಗೊಂಡ ಸಮಿತಿಯ ಎಲ್ಲ ಸದಸ್ಯರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದೇವೆ. ಈ ಹಿನ್ನೆಲೆಯಲ್ಲಿ ಜೂ.25ರಂದು ಜಿಲ್ಲಾಧಿಕಾರಿಗಳು ಭೇಟಿಯಾಗಿ ಈ ವಿಚಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರಿಗೆ ವರದಿ ಸಲ್ಲಿಸಿರುವುದಾಗಿ ತಿಳಿಸಿದ್ದರು. ಇದೀಗ ಇಲಾಖೆಯಿಂದ ಅಧೀಕ್ಷಕರ ವಿರುದ್ಧ ಕ್ರಮ ತೆಗೆದುಕೊಳ್ಳುವ ಭರವಸೆ ಯನ್ನು ನೀಡಲಾಗಿದೆ ಎಂದು ಅವರು ಪತ್ರಿಕೆಗೆ ತಿಳಿಸಿದ್ದಾರೆ.
ಈ ಮಕ್ಕಳ ಕಲ್ಯಾಣ ಸಮಿತಿಯು ಒಂಭತ್ತು ತಿಂಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದು, ರೋನಾಲ್ಡ್ ಪುರ್ಟಾಡೋ ತಿಂಗಳ ಹಿಂದೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.







