ಅಶ್ಲೀಲ ವೆಬ್‌ಸೈಟ್‌ನಿಂದ ವಂಚನೆ: ದಂಪತಿ ಸೆರೆ
ಬೆಂಗಳೂರು, ಜೂ.27: ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ವೆಬ್‌ಸೈಟ್ ಮೂಲಕ ಅಮಾಯಕರನ್ನು ವಂಚಿಸುತ್ತಿದ್ದ ಆರೋಪದ ಮೇಲೆ ಇಬ್ಬರು ದಂಪತಿಗಳನ್ನು ಬಂಧಿಸುವಲ್ಲಿ ಸೈಬರ್ ಕ್ರೈಂ ವಿಭಾಗದ ಸಿಐಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೊಲ್ಕತ್ತಾದ ಬಿಕಾಂ ಪದವೀಧರೆ ರೂಪಾಲಿ ಮಜೂಂದಾರ್(39), ಕುಶನ್ ಮಜೂಂದಾರ್(48) ಬಂಧಿತ ಆರೋಪಿಗಳೆಂದು ಪೊಲೀಸರು ಗುರುತಿಸಿದ್ದಾರೆ. ಸಾಫ್ಟ್‌ವೇರ್ ಇಂಜಿನಿಯರ್ ನೀಡಿದ್ದ ದೂರಿನ ಆದಾರದ ಮೇಲೆ ಆರೋಪಿಗಳನ್ನು ಕೊಲ್ಕತ್ತದಲ್ಲಿ ಬಂಧಿಸಿ, ಬೆಂಗಳೂರಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಸೈಬರ್ ಕ್ರೈಮ್ ಪೊಲೀಸರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮಿಂಗಲ್ಸ್ 2 ಎಂಬ ಅಶ್ಲೀಲ ವೆಬ್‌ಸೈಟ್ ಮೂಲಕ ಅರ್ಪಿತಾ ಎಂಬ ಹೆಸರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ನನ್ನು ಪರಿಚಯಿಸಿ ಕೊಂಡಿದ್ದಾರೆ. ತದನಂತರ ಪರಸ್ಪರ ಮೊಬೈಲ್ ನಂಬರ್ ಪಡೆದು ವಾಟ್ಸಾಪ್ ಸಂದೇಶ ಮಾಡುತ್ತಾ ನಿರಂತರ ಸಂಪರ್ಕದಲ್ಲಿದ್ದಾರೆ. ಹೀಗೆ ನಂಬಿಕೆ ಗಿಟ್ಟಿಸಿಕೊಂಡಿದ್ದ, ಅರ್ಪಿತಾ ಎಂಬ ಹೆಸರಿನ ಅಪರಿಚಿತ ಮಹಿಳೆ ನನ್ನ ತಂದೆಗೆ ಆರೋಗ್ಯ ಸಮಸ್ಯೆಯಾಗಿದೆ. ಚಿಕಿತ್ಸೆಗೆ ಹಣದ ಅವಶ್ಯಕತೆಯಿದೆ ಎಂದು ಪುಸಲಾಯಿಸಿ 62 ಲಕ್ಷ ರೂ. ಹಣ ಜಮಾ ಮಾಡಿಸಿಕೊಂಡು ಮೋಸ ಮಾಡಿದ್ದರು. ಈ ಸಂಬಂಧ ಸಾಫ್ಟ್‌ವೇರ್ ಇಂಜಿನಿಯರ್ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ಪತ್ತೆಗಾಗಿ ರಚಿಸಿದ್ದ ಪೊಲೀಸರ ವಿಶೇಷ ತಂಡ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ 44 ಸಾವಿರ ರೂ. ನಗದು ಹಣ, ಎರಡು ಮೊಬೈಲ್ ಹಾಗೂ ಕೆಲವು ಬ್ಯಾಂಕ್ ಪಾಸ್ ಪುಸ್ತಗಳನ್ನು ವಶಪಡಿಸಿಕೊಂಡಿದ್ದಾರೆ. ಇಂತಹ ಅನೇಕ ಕೃತ್ಯಗಳನ್ನು ಎಸಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







