ಗೌರಿ ಲಂಕೇಶ್ ಹತ್ಯೆ ಪ್ರಕರಣ: 6 ಆರೋಪಿಗಳ ನ್ಯಾಯಾಂಗ ಬಂಧನ ಮುಂದುವರಿಕೆ
ಬೆಂಗಳೂರು, ಜೂ.27: ಹಿರಿಯ ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಆರು ಮಂದಿ ಆರೋಪಿಗಳ ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ 3ನೆ ಎಸಿಎಂಎಂ ಸೆಷನ್ಸ್ ಕೋರ್ಟ್ ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೆ 14 ದಿನಗಳ ಕಾಲ ವಿಸ್ತರಿಸಿ ಆದೇಶಿಸಿದೆ.
ಆರೋಪಿಗಳಾದ ಮದ್ದೂರಿನ ಕೆ.ಟಿ.ನವೀನ್ ಕುಮಾರ್, ವಿಜಯಪುರದ ಪರಶುರಾಮ್ ವಾಗ್ಮೋರೆ, ಮನೋಹರ್ ದುಂಡಪ್ಪ ಯಡವೆ, ಮಹಾರಾಷ್ಟ್ರದ ಅಮೋಲ್ ಕಾಳೆ, ಅಮಿತ್ ದೇಗ್ವೇಕರ್ ಮತ್ತು ಶಿಕಾರಿಪುರದ ಪ್ರವೀಣ್ ಅವರ ನ್ಯಾಯಾಂಗ ಬಂಧನ ಅವಧಿ ಬುಧವಾರಕ್ಕೆ ಅಂತ್ಯಗೊಂಡ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಯಿತು.
ಈ ವೇಳೆ ನ್ಯಾಯಾಧೀಶರು, ಎಸ್‌ಐಟಿ ಅಧಿಕಾರಿಗಳನ್ನು ಎಲ್ಲ ಆರೋಪಿಗಳನ್ನೂ ಒಟ್ಟಿಗೆ ಮತ್ತೆ ವಶಕ್ಕೆ ತೆಗೆದುಕೊಳ್ಳುತ್ತೀರಾ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಎಸ್‌ಐಟಿ ಅಧಿಕಾರಿಗಳು 'ಅಗತ್ಯವಿಲ್ಲ. ಈಗಾಗಲೇ ಎಲ್ಲ ಆರೋಪಿಗಳಿಂದ ಸ್ಥಳದ ಮಹಜರು ಹಾಗೂ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಆಗ, ನ್ಯಾಯಾಧೀಶರು ಎಲ್ಲ ಆರೋಪಿಗಳಿಗೆ ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು.
ನವೀನ್‌ಕುಮಾರ್ ಜಾಮೀನು ಅರ್ಜಿ ವಿಚಾರಣೆ ಬುಧವಾರ ನಡೆಯಿತು. ನ್ಯಾಯಾಧೀಶರು, ಸರಕಾರಿ ಅಭಿಯೋಜಕರಿಗೆ ವಾದ ಮಂಡಿಸಲು ಸೂಚಿಸಿದರು. ಸರಕಾರಿ ಅಭಿಯೋಜಕರು ಗುರುವಾರ ವಾದ ಮಂಡಿಸಲಿದ್ದಾರೆ.