ಬೆಳ್ತಂಗಡಿ: ನೀರಿಗೆ ಬಿದ್ದು ಕೊಚ್ಚಿ ಹೋಗುತ್ತಿದ್ದ ಬಾಲಕನನ್ನು ರಕ್ಷಿಸಿದ ರಿಕ್ಷಾ ಚಾಲಕ ಮುಹಮ್ಮದ್ ಅರ್ಫಾಕ್

ಮುಹಮ್ಮದ್ ಅರ್ಫಾಕ್
ಬೆಳ್ತಂಗಡಿ, ಜೂ. 27: ಕಿರು ಸೇತುವೆಯೊಂದನ್ನು ದಾಟುತ್ತಿದ್ದ ವೇಳೆ ಬಾಲನೋರ್ವ ನೀರಿಗೆ ಬಿದ್ದು ಕೊಚ್ಚಿ ಹೋಗುತಿದ್ದುದನ್ನು ಗಮನಿಸಿದ ರಿಕ್ಷಾ ಚಾಲಕನೋರ್ವ ಹರಿಯುವ ನೀರಿಗೆ ಹಾರಿ ಬಾಲಕನನ್ನು ರಕ್ಷಿಸಿದ ಘಟನೆ ಬುಧವಾರ ಸಂಜೆ ತಣ್ಣೀರು ಪಂತ ಗ್ರಾಮದ ಬೋವು ಎಂಬಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ, ರಿಕ್ಷಾ ಚಾಲಕನಾಗಿರುವ ಮುಹಮ್ಮದ್ ಅರ್ಫಾಕ್ ಎಂಬವರು ಸಾಹಸಮೆರೆದು ಬಾಲಕನನ್ನು ರಕ್ಷಿಸಿದವರು.
ಬುಧವಾರ ಶಾಲೆ ಬಿಟ್ಟು ವಿದ್ಯಾರ್ಥಿಗಳು ಮನೆಗೆ ಹೋಗುತ್ತಿದ್ದ ವೇಳೆ ನಾಲ್ಕನೆ ತರಗತಿಯ ಮುಹಮ್ಮದ್ ಅಫ್ನಾನ್ ಆಕಸ್ಮಿಕವಾಗಿ ಕಾಲುಜಾರಿ ತುಂಬಿ ಹರಿಯುತ್ತಿದ್ದ ತೊರೆಗೆ ಬಿದ್ದಿದ್ದಾನೆ. ಆತನೊಂದಿಗಿದ್ದ ಮತ್ತೊಬ್ಬ ಬಾಲಕ ಜೋರಾಗಿ ಕೂಗಿದ್ದಾನೆ ಇದೇ ಸಮಯದಲ್ಲಿ ಮುಹಮ್ಮದ್ ಅರ್ಫಾಕ್ ಶಾಲೆಯಿಂದ ಮಕ್ಕಳನ್ನು ರಿಕ್ಷಾದಲ್ಲಿ ಕರೆದುಕೊಂಡು ಬರುತ್ತಿದ್ದು, ಬೊಬ್ಬೆ ಕೇಳಿ ಕೂಡಲೇ ಅಲ್ಲಿಗೆ ಓಡಿ ನೀರಿಗೆ ಹಾರಿ, ಕೊಚ್ಚಿಕೊಂಡು ಹೋಗುತ್ತಿದ್ದ ಬಾಲಕನನ್ನು ರಕ್ಷಿಸಿದ್ದಾರೆ.
ಬಾಲಕ ಸ್ಥಳೀಯ ನಿವಾಸಿ ಸಲೀಂ ಎಂಬವರ ಪುತ್ರನಾಗಿದ್ದು, ಉಪ್ಪಿನಂಗಡಿಯ ಖಾಸಗಿ ಶಾಲೆಯ ವಿದ್ಯಾರ್ಥಿ. ಅರ್ಫಾಕ್ ಅವರ ಸಮಯ ಪ್ರಜ್ಞೆ ಹಾಗೂ ಸಾಹಸದಿಂದಾಗಿ ಬಾಲಕ ಬದುಕಿ ಉಳಿಯುವಂತಾಗಿದೆ.





