ಕೊಡ್ಮಾಣ್ ಗುಡ್ಡ ಜರಿದು: ಮೂರು ಶೆಡ್‌ಗಳು ನೆಲಸಮ

ಬಂಟ್ವಾಳ, ಜೂ. 27: ಕಳೆದ ಎರಡು ದಿನಗಳಿಂದ ಸುರಿದ ಗಾಳಿ-ಮಳೆಗೆ ಫರಂಗಿಪೇಟೆ ಸಮೀಪದ ಕೊಡ್ಮಾಣ್ ಗ್ರಾಮದ ಕೊಟ್ಟಿಂಜೆ ಎಂಬಲ್ಲಿ ಗುಡ್ಡವೊಂದು ಜರಿದು ಬಿದ್ದು, ಅಮ್ಮೆಮಾರ್-ಮಲ್ಲೂರು ರಸ್ತೆ ಸಂಪರ್ಕ ಕಡಿತ ಉಂಟಾಗಿ, ಜನಜೀವನ ಅಸ್ತವ್ಯಸ್ತಗೊಂಡಿತು.
ಇಲ್ಲಿನ ಬೃಹತ್ ಗುಡ್ಡದ ಬುಡದಲ್ಲಿ ಅಗೆದ ಪರಿಣಾಮ ಬುಧವಾರ ಸುರಿದ ಜಡಿಮಳೆಗೆ ಪೂರ್ತಿ ಮಣ್ಣು ಸಡಿಲಗೊಂಡು ಪಕ್ಕದ ರಸ್ತೆಗೆ ಕುಸಿದು ಬಿದ್ದಿದೆ. ಪರಿಣಾಮ ಗುಡ್ಡದ ಅಡಿಭಾಗದಲ್ಲಿ ನಿರ್ಮಾಣಗೊಂಡಿದ್ದ ಮೂರು ಶೆಡ್‌ಗಳು ನೆಲಸಮವಾಗಿದೆ. ಮಣ್ಣು ಶೆಡ್ಡಿನ ಮೇಲೆಯೇ ಬಿದ್ದು, ರಸ್ತೆಯನ್ನು ಕೂಡಾ ಆವರಿಸಿದ್ದು, ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಸುದ್ದಿ ತಿಳಿದ ಸ್ಥಳೀಯ ಪಂಚಾಯತ್ ಜೆಸಿಬಿ ಮೂಲಕ ಮಣ್ಣನ್ನು ತೆರವುಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಶೆಡ್ಡಿನಲ್ಲಿ ಯಾರೂ ಇಲ್ಲದ ಕಾರಣ ಭಾರೀ ಅಪಾಯ ತಪ್ಪಿದಂತಾಗಿದೆ.
Next Story





